ಕರ್ನಾಟಕ

karnataka

ETV Bharat / science-and-technology

Chandrayaan-3.. 'ಶಿವಶಕ್ತಿ ಪಾಯಿಂಟ್'​ನಲ್ಲಿ ಓಡಾಡುತ್ತಿರುವ ಪ್ರಜ್ಞಾನ್​​ ರೋವರ್​.. ತಾಜಾ ವಿಡಿಯೋ ಹಂಚಿಕೊಂಡ ಇಸ್ರೋ - ಚಂದ್ರನ ದಕ್ಷಿಣ ಧ್ರುವದ ರಹಸ್ಯ

ಚಂದ್ರನ ಮೇಲ್ಮೈ ಮೇಲೆ ಓಡಾಡುತ್ತಿರುವ ಪ್ರಜ್ಞಾನ್​ ರೋವರ್​ನ ಹೊಸ ವಿಡಿಯೋವನ್ನು ಇಸ್ರೋ ಹಂಚಿಕೊಂಡಿದೆ. ಗುರುತಿಸಲಾದ ಶಿವಶಕ್ತಿ ಪಾಯಿಂಟ್​ ಸುತ್ತಲೂ ಅದು ಸಂಚಾರ ನಡೆಸುತ್ತಿದೆ.

ಪ್ರಗ್ಯಾನ್​ ರೋವರ್​ ತಾಜಾ ವಿಡಿಯೋ
ಪ್ರಗ್ಯಾನ್​ ರೋವರ್​ ತಾಜಾ ವಿಡಿಯೋ

By ETV Bharat Karnataka Team

Published : Aug 26, 2023, 6:05 PM IST

ಬೆಂಗಳೂರು:ಚಂದ್ರನ ಶಿವಶಕ್ತಿ ಪಾಯಿಂಟ್​ನಲ್ಲಿ(ದಕ್ಷಿಣ ಧ್ರುವ) ಇಳಿದಿರುವ ಚಂದ್ರಯಾನ-3 ಯೋಜನೆಯ ಉಪಗ್ರಹ ಪ್ರಜ್ಞಾನ್​​ ರೋವರ್​ ಚಂದ್ರನ ಮೇಲೆ ಸಂಚರಿಸುತ್ತಿರುವ ಮತ್ತೊಂದು ತಾಜಾ ವಿಡಿಯೋವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಹಂಚಿಕೊಂಡಿದೆ. ನಿನ್ನೆ (ಆಗಸ್ಟ್​ 25)ಯಷ್ಟೇ ರೋವರ್​ 8 ಮೀಟರ್​ ಸಂಚಾರ ನಡೆಸಿತ್ತು.

ಚಂದ್ರನ ದಕ್ಷಿಣ ಧ್ರುವದ ರಹಸ್ಯಗಳನ್ನು ಅಧ್ಯಯನ ಮಾಡುವ ನಿಮಿತ್ತ ರೋವರ್​ ಸಂಚರಿಸುತ್ತಿದ್ದು, 'ಶಿವಶಕ್ತಿ ಪಾಯಿಂಟ್' ಸುತ್ತಲೂ ತಿರುಗುತ್ತಿದೆ ಎಂದು ಇಸ್ರೋ ಹೇಳಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್​ ಇಳಿದ ಜಾಗಕ್ಕೆ ಶಿವಶಕ್ತಿ ಅಂತಲೂ, ಆ ದಿನ ಅಂದರೆ ಆಗಸ್ಟ್​ 23 ಅನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದೂ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಘೋಷಿಸಿದರು.

'ದಕ್ಷಿಣ ಧ್ರುವದಲ್ಲಿ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಶಿವಶಕ್ತಿ ಪಾಯಿಂಟ್‌ನ ಸುತ್ತಲೂ ಪ್ರಜ್ಞಾನ್​ ರೋವರ್ ತಿರುಗುತ್ತಿದೆ' ಎಂದು ಇಸ್ರೋ X (ಹಿಂದೆ ಟ್ವಿಟರ್) ನಲ್ಲಿ ಒಕ್ಕಣೆ ಬರೆದು ವಿಡಿಯೋವನ್ನು ಹಂಚಿಕೊಂಡಿದೆ. 40 ಸೆಕೆಂಡ್‌ಗಳ ವಿಡಿಯೋದಲ್ಲಿ ರೋವರ್ ಚಂದ್ರನ ಮೇಲ್ಮೈಯಲ್ಲಿ ಚಲಿಸುತ್ತಿರುವುದನ್ನು ಕಾಣಬಹುದು. ಜೊತೆಗೆ ಅದು ಚಲಿಸಿದ ಜಾಗದಲ್ಲಿ ಅದರ ಹೆಜ್ಜೆ ಗುರುತುಗಳೂ ಮೂಡಿವೆ.

ಬಾಹ್ಯಾಕಾಶ ದಿನ ಘೋಷಣೆ:ಬ್ರಿಕ್ಸ್​ ಶೃಂಗಸಭೆ ಹಿನ್ನೆಲೆ ದಕ್ಷಿಣ ಆಫ್ರಿಕಾ ಮತ್ತು ಗ್ರೀಸ್​ ಪ್ರವಾಸದಲ್ಲಿದ್ದ ಪ್ರಧಾನಿ ಮೋದಿ ಅವರು ಭಾರತಕ್ಕೆ ಹಿಂದಿರುಗಿದ್ದು, ಇಂದು ಬೆಳಗ್ಗೆ ಬೆಂಗಳೂರಿನ ಇಸ್ರೋ ನಿಯಂತ್ರಣ ಕಚೇರಿಗೆ ಭೇಟಿ ನೀಡಿದ್ದರು. ಎಲ್ಲ ವಿಜ್ಞಾನಿಗಳಿಗೆ ಅಭಿನಂದನೆ ಮತ್ತು ಧನ್ಯವಾದ ತಿಳಿಸಿದ ಪ್ರಧಾನಿಗಳು ಲ್ಯಾಂಡರ್ 'ವಿಕ್ರಮ್' ಸ್ಪರ್ಶಿಸಿದ ಸ್ಥಳವನ್ನು 'ಶಿವಶಕ್ತಿ ಪಾಯಿಂಟ್' ಎಂದು ಹೆಸರಿಸಿದರು. ಲ್ಯಾಂಡರ್​ ಚಂದ್ರಸ್ಪರ್ಶವಾದ ದಿನವನ್ನು 'ರಾಷ್ಟ್ರೀಯ ಬಾಹ್ಯಾಕಾಶ ದಿನ' ಎಂದು ಪ್ರಕಟಿಸಿದರು.

ಶಿವಶಕ್ತಿ ಹೆಸರನ್ನು ವಿವರಿಸಿದ ಪ್ರಧಾನಿ ಮೋದಿ ಅವರು, ಶಿವ ಎಂದರೆ ಮಾನವೀಯತೆ ಮತ್ತು ನಿರ್ಣಾಯಕ ರೂಪ. ಇದನ್ನು ಸಾಕಾರ ಮಾಡಲು ಶಕ್ತಿ ಬೇಕು. ಚಂದ್ರನ ಶಿವಶಕ್ತಿ ಪಾಯಿಂಟ್​ ಬಿಂದುವು ಹಿಮಾಲಯದಿಂದ ಕನ್ಯಾಕುಮಾರಿಯೊಂದಿಗೆ ಸಂಪರ್ಕವನ್ನು ಸಾಧಿಸುತ್ತದೆ ಎಂದು ಹೇಳಿದರು.

ಆಗಸ್ಟ್ 23 ಅನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಘೋಷಿಸಿದ್ದು, ಈ ದಿನವು ವಿಜ್ಞಾನ, ತಂತ್ರಜ್ಞಾನ ಮತ್ತು ನವೀನತೆಗಳನ್ನು ಸಾಕಾರಗೊಳಿಸುತ್ತದೆ. ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳ ಸಹಯೋಗದಲ್ಲಿ "ಆಡಳಿತದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ" ಕುರಿತು ರಾಷ್ಟ್ರೀಯ ಹ್ಯಾಕಥಾನ್‌ಗಳನ್ನು ಆಯೋಜಿಸಲು ಇಸ್ರೋಗೆ ಪ್ರಧಾನಮಂತ್ರಿ ವಿನಂತಿಸಿದರು.(ಪಿಟಿಐ)

ಇದನ್ನೂ ಓದಿ:ಚಂದ್ರನ ದಕ್ಷಿಣ ಧ್ರುವದಲ್ಲಿ 8 ಮೀಟರ್‌ ದೂರ ಕ್ರಮಿಸಿದ ರೋವರ್ ಪ್ರಜ್ಞಾನ್: ಇಸ್ರೋ

ABOUT THE AUTHOR

...view details