ಹೈದರಾಬಾದ್: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ 3 ಮಿಷನ್ (Chandrayaan 3 mission) ಉಡಾವಣೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ಜುಲೈ 14ರಂದು ಮಧ್ಯಾಹ್ನ 2:35ಕ್ಕೆ ಗಗನಕ್ಕೆ ಬಾಹ್ಯಾಕಾಶ ನೌಕೆ ಜಿಗಿಯಲಿದೆ. ಆಗಸ್ಟ್ 23 ಅಥವಾ ಆಗಸ್ಟ್ 24ರಂದು ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿಯುವ ಗುರಿ ಹೊಂದಲಾಗಿದೆ.
ಇಸ್ರೋ ಜುಲೈ 12 ಮತ್ತು 19ರ ನಡುವೆ ಚಂದ್ರಯಾನ 3ರ ಉಡಾವಣೆ ಮಾಡಲಿದೆ ಎಂದು ವರದಿಯಾಗಿತ್ತು. ಇದೀಗ ದಿನಾಂಕವನ್ನು ಅಂತಿಮಗೊಳಿಸಿದೆ. ಚಂದ್ರಯಾನ-3 ಮಿಷನ್‌ನ ಮುಖ್ಯ ಗಮನವು ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತ ಮತ್ತು ಯಶಸ್ವಿ ಲ್ಯಾಂಡಿಂಗ್ ಸಾಧಿಸುವುದಾಗಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಯು ಭಾರತದ ಅಭಿವೃದ್ಧಿ ಹೊಂದುತ್ತಿರುವ ಬಾಹ್ಯಾಕಾಶ ಕ್ಷೇತ್ರಕ್ಕೆ ಮತ್ತೊಂದು ಮಹತ್ವದ ಮೈಲಿಗಲ್ಲು ಆಗಲಿದೆ.
ಚಂದ್ರಯಾನ-3 ಮಿಷನ್ ಉಡಾವಣೆ ದಿನಾಂಕ ಹಾಗೂ ಸಮಯದ ಬಗ್ಗೆ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಅಧಿಕೃತವಾಗಿ ಖಚಿತ ಪಡಿಸಿದೆ. ಆಗಸ್ಟ್ 23 ಅಥವಾ 24ರ ನಡುವೆ ಚಂದ್ರನ ಮೇಲೆ ಲ್ಯಾಡಿಂಗ್ಗೆ ಪ್ರಯತ್ನಿಸಲಿದೆ ಎಂದು ಇಸ್ರೋ ಅಧ್ಯಕ್ಷರು ಹೇಳಿದ್ದಾರೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಚಂದ್ರಯಾನ 3ರ ಉಡಾವಣೆಗೆ ಭರದ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಈ ಬಾಹ್ಯಾಕಾಶ ನೌಕೆಯನ್ನು ಲಾಂಚ್ ವೆಹಿಕಲ್ ಮಾರ್ಕ್-III (LVM3)ನೊಂದಿಗೆ ಯಶಸ್ವಿಯಾಗಿ ಜೋಡಿಸಲಾಗಿದೆ.
ಇದು ಬಾಹ್ಯಾಕಾಶ ನೌಕೆ ಮತ್ತು ಉಡಾವಣಾ ವಾಹನವು ಮುಂದಿನ ಕಾರ್ಯಾಚರಣೆಗೆ ಸಿದ್ಧವಾಗಿದೆ ಎಂದು ಖಚಿತಪಡಿಸುತ್ತದೆ. ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಏಕೀಕರಣ ಪ್ರಕ್ರಿಯೆಯು ಪೂರ್ಣಗೊಂಡಿದೆ. ಜುಲೈ 14ರಂದು ಮಧ್ಯಾಹ್ನ 2:30ಕ್ಕೆ ಯೋಜಿತ ಉಡಾವಣೆಗೆ ವೇದಿಕೆ ಸಿದ್ಧಪಡಿಸಲಾಗಿದೆ. ಚಂದ್ರಯಾನ-3 ಮಿಷನ್‌ನ ಮೂಲ ಉದ್ದೇಶವು ಚಂದ್ರನ ಮೇಲೆ ಯಶಸ್ವಿ ಲ್ಯಾಂಡಿಂಗ್ ಮೂಲಕ ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸುವುದಾಗಿದೆ.
ಚಂದ್ರನ ಮೇಲ್ಮೈಗೆ ಲ್ಯಾಂಡರ್ ಮತ್ತು ರೋವರ್ ಅನ್ನು ತಲುಪಿಸುವ ಮೂಲಕ ಇದನ್ನು ಸಾಧಿಸಲಾಗುತ್ತದೆ. ಚಂದ್ರಯಾನ 2 ಮಿಷನ್‌ನ ಬಾಹ್ಯಾಕಾಶ ನೌಕೆಯು ಲ್ಯಾಂಡಿಂಗ್ ಪ್ರಯತ್ನದ ಸಮಯದಲ್ಲಿ ಅನಿರೀಕ್ಷಿತ ಹಿನ್ನಡೆಯನ್ನು ಎದುರಿಸಿತು. ಚಂದ್ರಯಾನ 3ರ ಯೋಜನೆಯು ಹಿಂದಿನ ಮಿಷನ್‌ನ ನ್ಯೂನತೆಗಳನ್ನು ಸರಿಪಡಿಸಿ ಮತ್ತು ಯಶಸ್ವಿ ಸಾಫ್ಟ್ ಲ್ಯಾಂಡಿಂಗ್ ಸಾಧಿಸುವ ಗುರಿಯನ್ನು ಹೊಂದಲಾಗಿದೆ.