ಬೆಂಗಳೂರು :ಚಂದ್ರಯಾನ-3 ಉಪಗ್ರಹವನ್ನು ಚಂದ್ರನ ಮೇಲೆ ಇಳಿಸಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ವಿಜ್ಞಾನಿಗಳ ಶ್ರಮ ಮತ್ತು ಸಾಹಸವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹಾಡಿ ಹೊಗಳಿದರು. ಅಲ್ಲದೇ, ಆಕಾಶವೇ ಮಿತಿಯಲ್ಲ, ಅದರಾಚೆಗೂ ನಾವಿದ್ದೇವೆ. ಅದನ್ನು ನೀವು ಸಾಧಿಸಿದ್ದೀರಿ ಎಂದು ಬಣ್ಣಿಸಿದರು. ಇದರಿಂದ ಪ್ರೇರಣೆ ಪಡೆದ ಇಸ್ರೋ ಸಂಸ್ಥೆಯು ಪ್ರಧಾನಿ ಮೋದಿ ಅವರಿಗೆ ವಿಶೇಷ ಧನ್ಯವಾದ ಹೇಳಿದೆ.
ಎಕ್ಸ್ನಲ್ಲಿ (ಹಿಂದಿನ ಟ್ವಿಟರ್) ಬರೆದುಕೊಂಡಿರುವ ಇಸ್ರೋ, ವಿಜ್ಞಾನಿಗಳ ಶ್ರಮದ ಮೇಲಿನ ನಿಮ್ಮ ಅಚಲವಾದ ನಂಬಿಕೆ, ಮೆಚ್ಚುಗೆ, ಪ್ರೋತ್ಸಾಹಕ್ಕಾಗಿ ನಿಮಗೆ ಕೃತಜ್ಞತೆ ಸಲ್ಲಿಸಲಾಗುವುದು. ನಿಮ್ಮ ಮಾತುಗಳು ರಾಷ್ಟ್ರದ ಅಭಿವೃದ್ಧಿ ಮತ್ತು ಹೆಚ್ಚಿನ ಸಾಧನೆಗಳಿಗೆ ಉತ್ತೇಜಿಸುತ್ತವೆ. ಮುಂದಿನ ಪ್ರಯತ್ನಗಳಿಗೆ ಇದು ಪ್ರೇರಕ ಎಂದು ಹೇಳಿದ್ದಾರೆ.
ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಅವರು ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಚಂದ್ರಯಾನ-3 ಐತಿಹಾಸಿಕ ಘಟನೆಯ ಬಗ್ಗೆ ಮೆಚ್ಚುಗೆ ಸೂಚಿಸಿ, ಭಾವುಕತೆ ವ್ಯಕ್ತಪಡಿಸಿದ್ದು ನಮಗೆ ಶಕ್ತಿ ತಂದಿದೆ. ಚಂದ್ರಯಾನ-2, ಚಂದ್ರಯಾನ-3 ಲ್ಯಾಂಡಿಂಗ್ ಪ್ರದೇಶಗಳಿಗೆ 'ತಿರಂಗಾ' ಮತ್ತು 'ಶಿವಶಕ್ತಿ' ಎಂದು ಹೆಸರಿಟ್ಟಿದ್ದು ನಮಗೆ ಹೆಮ್ಮೆ ತಂದಿದೆ ಎಂದು ಹೇಳಿದ್ದಾರೆ.
ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಡಾ ಎಸ್ ಉನ್ನಿಕೃಷ್ಣನ್ ನಾಯರ್ ಮಾತನಾಡಿ, ಮುಂಬರುವ ಗಗನಯಾನ್ ಮಿಷನ್ಗೆ ತಯಾರಿ ನಡೆಸಲಾಗಿದೆ. ಪರೀಕ್ಷಾ ವಾಹನವನ್ನು ಬಳಸಿಕೊಂಡು ಎಸ್ಕೇಪ್ ಸಿಸ್ಟಮ್ನ ಇನ್ಫ್ಲೈಟ್ ಅಬಾರ್ಟ್ ಪರೀಕ್ಷೆಯನ್ನು ಮಾಡಲಿದ್ದೇವೆ. ಗಗನಯಾನ ಎಸ್ಕೇಪ್ ಸಿಸ್ಟಮ್ ಅತ್ಯಂತ ಪ್ರಮುಖ ಅಂಶವಾಗಿದೆ. ಆದ್ದರಿಂದ ವಿಭಿನ್ನ ಪರಿಸ್ಥಿತಿಗಳಲ್ಲಿ ಪರೀಕ್ಷಿಸಲು ಬಯಸಿದ್ದೇವೆ. ಇದರ ಪರೀಕ್ಷೆಯನ್ನು ಅಕ್ಟೋಬರ್‌ನಲ್ಲಿ ಯೋಜಿಸಲಾಗಿದೆ. ಎಲ್ಲಾ ಕಾರ್ಯ ಚಟುವಟಿಕೆಗಳು ಸಾಗುತ್ತಿವೆ ಎಂದು ತಿಳಿಸಿದರು.