ನವದೆಹಲಿ: ಇನ್ನು ಮುಂದೆ ಎಕ್ಸ್ (ಟ್ವಿಟರ್) ಯಾರಿಗೂ ಉಚಿತವಾಗಿರುವುದಿಲ್ಲ. ಎಲ್ಲಾ ಎಕ್ಸ್ ಬಳಕೆದಾರರಿಂದ ಮಾಸಿಕ ಸಣ್ಣ ಮೊತ್ತದ ಶುಲ್ಕ ಸಂಗ್ರಹಿಸಲು ಎಲೋನ್ ಮಸ್ಕ್ ಪ್ಲಾನ್ ಮಾಡುತ್ತಿದ್ದಾರೆ. ಲೈವ್ ಸ್ಟ್ರೀಮಿಂಗ್ ಮೂಲಕ ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಸಂವಾದ ನಡೆಸಿದ ಮಸ್ಕ್, ಎಕ್ಸ್ ಸಾಮಾಜಿಕ ಮಾಧ್ಯಮವು ಬಹಳ ದಿನಗಳ ಕಾಲ ಹೀಗೆಯೇ ಫ್ರೀ ಆಗಿರಲು ಸಾಧ್ಯವಿಲ್ಲ ಎಂದು ಹೇಳಿದರು. ಎಕ್ಸ್ ಮಾಧ್ಯಮದಲ್ಲಿ ಬಾಟ್ಗಳ ಹಾವಳಿಯನ್ನು ತಡೆಗಟ್ಟಲು ಹೆಚ್ಚಿನ ಆದಾಯದ ಅಗತ್ಯವಿದೆ ಎಂಬುದು ಮಸ್ಕ್ ಅವರ ಪ್ರತಿಪಾದನೆಯಾಗಿದೆ.
"ಬಾಟ್ಗಳ ವಿಶಾಲ ಸೈನ್ಯವನ್ನು ಎದುರಿಸಲು ನಾವು ಕೈಗೊಳ್ಳಬಹುದಾದ ಏಕೈಕ ಕ್ರಮ ಇದಾಗಿದೆ." ಎಂದು ಮಸ್ಕ್ ಸೋಮವಾರ ತಡರಾತ್ರಿ ಹೇಳಿದರು. "ಒಂದು ಬಾಟ್ ತೆಗೆದುಹಾಕಲು ಒಂದು ಪೆನ್ನಿಯ ಒಂದು ಸಣ್ಣ ಭಾಗವನ್ನು ಖರ್ಚು ಮಾಡಬೇಕಾಗುತ್ತದೆ. ಅದು ಒಂದು ಪೆನ್ನಿಯ ಹತ್ತನೇ ಒಂದು ಭಾಗದಷ್ಟು ಸಣ್ಣದೇ ಇರಬಹುದು. ಆದರೆ ಇಂಥ ಬಾಟ್ಗಳ ಸೈನ್ಯವನ್ನು ತಡೆಗಟ್ಟಲು ಅದೆಷ್ಟೋ ಡಾಲರ್ಗಟ್ಟಲೆ ಖರ್ಚು ಮಾಡುವ ಪರಿಸ್ಥಿತಿ ಇರುವುದನ್ನು ನೋಡಿದರೆ ಬಾಟ್ಗಳ ನಿರ್ವಹಣಾ ವೆಚ್ಚ ತೀರಾ ಅಧಿಕವಾಗಿದೆ ಎಂದು ನನಗನಿಸುತ್ತದೆ" ಎಂದು ಬಿಲಿಯನೇರ್ ಮಸ್ಕ್ ಹೇಳಿದರು.
ಎಕ್ಸ್ ನಲ್ಲಿ ಎಲ್ಲರಿಗೂ ಶುಲ್ಕ ವಿಧಿಸುವ ಆಲೋಚನೆ ಹೊಸದೇನಲ್ಲ. ಕಳೆದ ವರ್ಷವೇ ಮಸ್ಕ್ ಈ ಬಗ್ಗೆ ಮಾತನಾಡಿದ್ದರು. ಕಂಪನಿಯು ಪ್ರಸ್ತುತ ತನ್ನ ಎಕ್ಸ್ ಪ್ರೀಮಿಯಂ ಬಳಕೆದಾರರಿಗೆ ತಿಂಗಳಿಗೆ 8 ಡಾಲರ್ ಶುಲ್ಕ ವಿಧಿಸುತ್ತದೆ. ಪ್ರೀಮಿಯಂ ಬಳಕೆದಾರರು ತಮ್ಮ ಪೋಸ್ಟ್ಗಳನ್ನು ಎಡಿಟ್ ಮಾಡಬಹುದು, ಸುದೀರ್ಘ ಪೋಸ್ಟ್ಗಳನ್ನು ಬರೆಯಬಹುದು, ಅವರ ಟ್ವೀಟ್ಗಳು ಸರ್ಚ್ನಲ್ಲಿ ಆದ್ಯತೆಯ ಮೇರೆಗೆ ಕಾಣಿಸಿಕೊಳ್ಳುತ್ತವೆ ಮತ್ತು ಪ್ರೀಮಿಯಂ ಬಳಕೆದಾರರಿಗೆ ಜಾಹೀರಾತುಗಳು ಪದೇ ಪದೆ ಕಾಣಿಸಿಕೊಳ್ಳುವುದಿಲ್ಲ.
ಎಕ್ಸ್ ಈಗ 550 ಮಿಲಿಯನ್ ಮಾಸಿಕ ಬಳಕೆದಾರರನ್ನು ಹೊಂದಿದ್ದು, ಪ್ರತಿದಿನ 100-200 ಮಿಲಿಯನ್ ಪೋಸ್ಟ್ಗಳನ್ನು ಸೃಷ್ಟಿಸುತ್ತಿದೆ ಎಂದು ಮಸ್ಕ್ ತಿಳಿಸಿದರು. ಪ್ರಸ್ತುತ ಎಷ್ಟು ಜನ ಪೇಡ್ ಸಬ್ಸ್ಕ್ರೈಬರ್ಸ್ ಇದ್ದಾರೆ ಎಂಬುದನ್ನು ಮಾತ್ರ ಮಸ್ಕ್ ಬಹಿರಂಗಪಡಿಸಲಿಲ್ಲ. 2022 ರ ಮೊದಲ ತ್ರೈಮಾಸಿಕದಲ್ಲಿ ಕೊನೆಯ ಬಾರಿಗೆ ತನ್ನ ಗಳಿಕೆಯ ವರದಿ ಪ್ರಕಟಿಸಿದ್ದ ಟ್ವಿಟರ್, ಆಗ 229 ಮಿಲಿಯನ್ ಎಂಡಿಎಯು (mDAUs -monetizable daily active user) ಬಳಕೆದಾರರು ತನ್ನ ಪ್ಲಾಟ್ಫಾರ್ಮ್ನಲ್ಲಿ ಇದ್ದಾರೆ ಎಂದು ಉಲ್ಲೇಖಿಸಿತ್ತು.
ಇದನ್ನೂ ಓದಿ : ಜೆಮಿನಿ; ಗೂಗಲ್ನ ಹೊಸ ಎಐ ಚಾಟ್ಬಾಟ್.. ಏನೆಲ್ಲ ವೈಶಿಷ್ಟ್ಯತೆಗಳಿವೆ ಗೊತ್ತಾ?