ನವದೆಹಲಿ:ಫೋನ್ ಬಳಕೆಯಲ್ಲಿಲ್ಲದಿರುವಾಗಲೂ ಅದರ ಮೈಕ್ರೊಫೋನ್ ಅನ್ನು ವಾಟ್ಸ್ಆ್ಯಪ್ ಗುಪ್ತವಾಗಿ ಬಳಸುತ್ತಿದೆ ಎಂಬ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ, ಖಾಸಗಿತನದ ನಿಯಮಗಳು ಉಲ್ಲಂಘನೆಯಾಗಿರುವ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದೆ. ಈ ಕುರಿತು ಟ್ವೀಟ್ ಮಾಡಿರುವ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ಸರ್ಕಾರವು ಉಲ್ಲಂಘನೆಯನ್ನು ಪರಿಶೀಲಿಸಲಿದೆ ಎಂದು ಹೇಳಿದ್ದಾರೆ. ಪ್ರಸ್ತುತ ಹೊಸ ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆಯನ್ನು ಸರ್ಕಾರ ಸಿದ್ಧಪಡಿಸುತ್ತಿರುವುದು ಗಮನಾರ್ಹ.
ಇದು ಒಪ್ಪಿಕೊಳ್ಳಲಾಗದ ಖಾಸಗಿತನ ಮತ್ತು ಗೌಪ್ಯತೆಯ ಉಲ್ಲಂಘನೆಯಾಗಿದೆ. ನಾವು ಇದನ್ನು ತಕ್ಷಣವೇ ಪರಿಶೀಲಿಸುತ್ತೇವೆ ಮತ್ತು ಹೊಸ ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ ಬಿಲ್ ಸಿದ್ಧವಾಗುತ್ತಿರುವ ಮಧ್ಯೆ ಯಾವುದೇ ಗೌಪ್ಯತೆಯ ಉಲ್ಲಂಘನೆಯ ಕುರಿತು ಕ್ರಮ ಕೈಗೊಳ್ಳುತ್ತೇವೆ ಎಂದು ಚಂದ್ರಶೇಖರ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಚಂದ್ರಶೇಖರ್ ಅವರ ಟ್ವೀಟ್‌ಗೆ ಪ್ರತಿಕ್ರಿಯೆಯನ್ನು ಕೋರಿ ಕಳುಹಿಸಲಾದ ಮೇಲ್‌ಗೆ ವಾಟ್ಸ್ಆ್ಯಪ್ ಇಂಡಿಯಾ ತಕ್ಷಣವೇ ಪ್ರತಿಕ್ರಿಯಿಸಲಿಲ್ಲ.
ಟ್ವಿಟರ್ ಕಂಪನಿಯಲ್ಲಿ ಕೆಲಸ ಮಾಡುವ ಎಂಜಿನಿಯರ್ ಒಬ್ಬರು ತನ್ನ ಫೋನ್‌ನ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ. ತಾವು ನಿದ್ರಿಸುತ್ತಿರುವಾಗಲೂ ವಾಟ್ಸ್ಆ್ಯಪ್ ಅವರ ಫೋನ್‌ನ ಮೈಕ್ರೊಫೋನ್ ಅನ್ನು ಹಲವಾರು ಬಾರಿ ಸಕ್ರಿಯಗೊಳಿಸಿರುವುದನ್ನು ತೋರಿಸುವ ಸ್ಕ್ರೀನ್ ಶಾಟ್ ಇದಾಗಿದೆ. ಟ್ವಿಟರ್ ಎಂಜಿನಿಯರ್ ಹಂಚಿಕೊಂಡ ಸ್ಕ್ರೀನ್ಶಾಟ್ಗೆ ಇನ್ನೂ ಹಲವಾರು ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ. ಟೆಸ್ಲಾ ಮತ್ತು ಟ್ವಿಟರ್ ಮುಖ್ಯಸ್ಥ ಎಲೋನ್ ಮಸ್ಕ್ ಕೂಡ ಇದಕ್ಕೆ ಪ್ರತಿಕ್ರಿಯಿಸಿದ್ದು, ವಾಟ್ಸ್ಆ್ಯಪ್ನ ಈ ಕ್ರಮ ವಿಲಕ್ಷಣಕಾರಿಯಾಗಿದೆ ಎಂದಿದ್ದಾರೆ.