ಜೆರುಸಲೇಂ:ಇಸ್ರೇಲ್ 2011ರಲ್ಲಿ ಐರನ್ ಡೋಮ್ ವ್ಯವಸ್ಥೆಯನ್ನು ಸಕ್ರಿಯಗೊಳಿಸಿದಾಗಿನಿಂದ, ಈ ಅತ್ಯಾಧುನಿಕ ರಾಕೆಟ್-ರಕ್ಷಣಾ ವ್ಯವಸ್ಥೆಯು ಗಾಜಾ ಪಟ್ಟಿಯಿಂದ ಹಾರಿಸಲಾದ ಸಾವಿರಾರು ರಾಕೆಟ್‌ಗಳನ್ನು ಆಕಾಶದಲ್ಲಿಯೇ ಹೊಡೆದುರುಳಿಸಿದೆ. ಈ ವ್ಯವಸ್ಥೆಯು ಇಸ್ರೇಲ್ ನಿವಾಸಿಗಳಿಗೆ ಸುರಕ್ಷತೆಯ ಭಾವನೆಯನ್ನು ನೀಡಿದೆ. ಗಾಜಾ ಪಟ್ಟಿಯಿಂದ ರಾಕೆಟ್‌ಗಳು ಹಾರಿ ಬರುವುದು ಮತ್ತು ಅವುಗಳನ್ನು ಐರನ್ ಡೋಮ್ ಪತ್ತೆ ಹಚ್ಚಿ ಹೊಡೆದುರುಳಿಸುವ ದೃಶ್ಯಗಳು ಇಸ್ರೇಲ್ನ ಆಕಾಶದಲ್ಲಿ ಆಗಾಗ ಕಾಣಿಸುತ್ತವೆ.
ಆದರೆ ಪ್ರಸ್ತುತ ಹಮಾಸ್ ಆರಂಭಿಸಿರುವ ಯುದ್ಧ ಇಸ್ರೇಲ್ ಪಾಲಿಗೆ ಕಠಿಣ ಸವಾಲಿನದ್ದಾಗಿದೆ. ಕೇವಲ ಎರಡು ವಾರಗಳಲ್ಲಿ ಹಮಾಸ್ ಇಸ್ರೇಲ್ ಕಡೆಗೆ 7,000 ರಾಕೆಟ್‌ಗಳನ್ನು ಹಾರಿಸಿತ್ತು ಎಂದು ಇಸ್ರೇಲ್ ಮಿಲಿಟರಿ ತಿಳಿಸಿದೆ. ಇದು 2007ರಲ್ಲಿ ಗಾಜಾದಲ್ಲಿ ಉಗ್ರಗಾಮಿ ಗುಂಪು ಅಧಿಕಾರವನ್ನು ವಶಪಡಿಸಿಕೊಂಡ ನಂತರ ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆದ ಹಿಂದಿನ ನಾಲ್ಕು ಯುದ್ಧಗಳಿಗಿಂತ ಹೆಚ್ಚಾಗಿದೆ. ವೆಸ್ಟ್ ಪಾಯಿಂಟ್ನ ಅಂಕಿಅಂಶಗಳ ಪ್ರಕಾರ, ಯುದ್ಧದ ಮೊದಲ ದಿನವಾದ ಅಕ್ಟೋಬರ್ 7 ರಂದು ಹಮಾಸ್ ಕನಿಷ್ಠ 2,000 ರಾಕೆಟ್‌ಗಳನ್ನು ಉಡಾವಣೆ ಮಾಡಿದೆ.
ಲೆಬನಾನ್‌ನ ಹಿಜ್ಬುಲ್ಲಾ ಕೂಡ ಯುದ್ಧ ಪ್ರಾರಂಭವಾದಾಗಿನಿಂದ ಇಸ್ರೇಲ್ ನ ಉತ್ತರ ಭಾಗದಲ್ಲಿ ನೂರಾರು ರಾಕೆಟ್ ಗಳನ್ನು ಹಾರಿಸಿದೆ. ಬಹುತೇಕ ರಾಕೆಟ್ ಗಳನ್ನು ತಡೆಹಿಡಿಯಲಾಗಿದ್ದರೂ, ಕೆಲ ರಾಕೆಟ್‌ಗಳು ಟೆಲ್ ಅವಿವ್ನ ಕಟ್ಟಡಗಳಿಗೆ ಅಪ್ಪಳಿಸಿ ಕನಿಷ್ಠ 11 ಜನ ಸಾವಿಗೀಡಾಗಿದ್ದಾರೆ. ಇಸ್ರೇಲ್ನ ಐರನ್ ಡೋಮ್ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ಐರನ್ ಡೋಮ್ ಹೇಗೆ ಕೆಲಸ ಮಾಡುತ್ತದೆ?: ಐರನ್ ಡೋಮ್ ಎಂಬುದು ಒಳಬರುವ ಅಲ್ಪ-ಶ್ರೇಣಿಯ ರಾಕೆಟ್ ಗಳನ್ನು ಪತ್ತೆಹಚ್ಚಲು ಮತ್ತು ಅವುಗಳನ್ನು ತಡೆಹಿಡಿಯಲು ರಾಡಾರ್‌ಗಳನ್ನು ಬಳಸುವ ಬ್ಯಾಟರಿಗಳ ಸರಣಿಯಾಗಿದೆ. ಪ್ರತಿ ಬ್ಯಾಟರಿಯಲ್ಲಿ ಮೂರು ಅಥವಾ ನಾಲ್ಕು ಲಾಂಚರ್ಗಳು, 20 ಕ್ಷಿಪಣಿಗಳು ಮತ್ತು ರಾಡಾರ್ ಇರುತ್ತವೆ ಎಂದು ಇಸ್ರೇಲ್ನ ರಫೇಲ್ ಡಿಫೆನ್ಸ್ ಸಿಸ್ಟಮ್ಸ್ನೊಂದಿಗೆ ಕೆಲಸ ಮಾಡುವ ಯುಎಸ್ ರಕ್ಷಣಾ ಸಾಮಗ್ರಿಗಳ ತಯಾರಕ ಕಂಪನಿ ರೇಥಿಯಾನ್ ತಿಳಿಸಿದೆ. ರಾಡಾರ್ ರಾಕೆಟ್ ಅನ್ನು ಪತ್ತೆಹಚ್ಚಿದ ನಂತರ, ರಾಕೆಟ್ ಜನನಿಬಿಡ ಪ್ರದೇಶದ ಕಡೆಗೆ ಹೋಗುತ್ತಿದೆಯೇ ಎಂದು ವ್ಯವಸ್ಥೆಯು ನಿರ್ಧರಿಸುತ್ತದೆ.