ಸ್ಯಾನ್ ಫ್ರಾನ್ಸಿಸ್ಕೊ: ಸಂಭವನೀಯ 'ಇಂಟರ್ನೆಟ್ ಸ್ಥಗಿತವಾಗುವ' (ಇಂಟರ್ನೆಟ್ ಅಪೋಕ್ಯಾಲಿಪ್ಸ್) (internet apocalypse) ಸಂದರ್ಭವನ್ನು ತಡೆಗಟ್ಟುವ ಪ್ರಯತ್ನದ ಭಾಗವಾಗಿ ನಾಸಾ (NASA) ವಿಶೇಷ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಿದೆ. ಇಂಟರ್ನೆಟ್ ಅಪೋಕ್ಯಾಲಿಪ್ಸ್ ಉಂಟಾದಲ್ಲಿ ತಿಂಗಳುಗಟ್ಟಲೆ ಇಂಟರ್ನೆಟ್ ಸ್ಥಗಿತವಾಗುವ ಆತಂಕವಿದೆ. ಯುಎಸ್ ಬಾಹ್ಯಾಕಾಶ ಸಂಸ್ಥೆಯ ಪಾರ್ಕರ್ ಸೋಲಾರ್ ಪ್ರೋಬ್ (ಪಿಎಸ್‌ಪಿ) ನೌಕೆಯು ಸೌರ ಮಾರುತದ (solar wind) ಮೂಲಕ ನ್ಯಾವಿಗೇಟ್ ಮಾಡುವ ಮೂಲಕ ಈ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ.
ಮುಂಬರುವ ಸೌರ ಚಂಡಮಾರುತದ ಸಂಭಾವ್ಯ ಪ್ರಭಾವದ ಬಗ್ಗೆ ವಿಜ್ಞಾನಿಗಳು ಈಗಾಗಲೇ ಎಚ್ಚರಿಸಿದ್ದಾರೆ. ಇದನ್ನು ಸಾಮಾನ್ಯವಾಗಿ "ಇಂಟರ್ನೆಟ್ ಅಪೋಕ್ಯಾಲಿಪ್ಸ್" ಎಂದು ಕರೆಯಲಾಗುತ್ತದೆ. ಈ ಪರಿಣಾಮ ಬಹುಶಃ ಮುಂದಿನ ದಶಕದಲ್ಲಿ ಎದುರಾಗಬಹುದು. 2018 ರಲ್ಲಿ ಉಡಾವಣೆಯಾದ ಬಾಹ್ಯಾಕಾಶ ನೌಕೆಯು ಈಗಾಗಲೇ ಗಮನಾರ್ಹ ಪ್ರಯಾಣ ಮಾಡಿದ್ದು, ಸೌರ ಚಂಡಮಾರುತ ಉತ್ಪಾದನೆಯಾಗುವ ಸೂರ್ಯನ ಮೇಲ್ಮೈಗೆ ಇದು ಹತ್ತಿರ ತಲುಪಿದೆ.
ಸೌರ ಮಾರುತ ಇದು ಕರೋನಾ ಎಂದು ಕರೆಯಲ್ಪಡುವ ಸೂರ್ಯನ ಹೊರಗಿನ ವಾತಾವರಣದಿಂದ ಹೊರಹೊಮ್ಮುವ ಚಾರ್ಜ್ಡ್ ಕಣಗಳ ನಿರಂತರ ಪ್ರವಾಹವನ್ನು ಒಳಗೊಂಡಿರುತ್ತದೆ. ತೀವ್ರವಾದ ಶಾಖ ಮತ್ತು ವಿಕಿರಣದ ಕಠಿಣ ಪರಿಸ್ಥಿತಿಗಳ ಹೊರತಾಗಿಯೂ ಪಾರ್ಕರ್ ಸೋಲಾರ್ ಪ್ರೋಬ್ ನೌಕೆಯು ಸೂರ್ಯನ ಕಾರ್ಯಚಟುವಟಿಕೆಗಳ ಬಗ್ಗೆ ಪ್ರಮುಖ ಮಾಹಿತಿಯನ್ನು ಸಂಗ್ರಹಿಸುತ್ತಿದೆ.
ಅಧ್ಯಯನದ ಪ್ರಮುಖ ಲೇಖಕರಾಗಿ ಕಾರ್ಯನಿರ್ವಹಿಸಿದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಪ್ರೊಫೆಸರ್ ಸ್ಟುವರ್ಟ್ ಬೇಲ್ ಅವರು ಸೌರ ಮಾರುತವನ್ನು ಅರ್ಥಮಾಡಿಕೊಳ್ಳುವುದು ಏಕೆ ಮಹತ್ವದ್ದಾಗಿದೆ ಎಂಬುದನ್ನು ವಿವರಿಸಿದ್ದಾರೆ. "ಸೂರ್ಯನಿಂದ ಭೂಮಿಗೆ ಬರುವ ಗಾಳಿಯು ಸಾಕಷ್ಟು ಮಾಹಿತಿಯನ್ನು ಒಳಗೊಂಡಿರುತ್ತದೆ. ಆದ್ದರಿಂದ ಭೂಮಿಯ ಮೇಲಿನ ಪ್ರಾಯೋಗಿಕ ಕಾರಣಗಳಿಗಾಗಿ ಸೂರ್ಯನ ಗಾಳಿಯ ಹಿಂದಿನ ಕಾರ್ಯವಿಧಾನವನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ" ಎಂದು ಬೇಲ್ ಉಲ್ಲೇಖಿಸಿದ್ದಾರೆ.
"ಸೂರ್ಯನು ಹೇಗೆ ಶಕ್ತಿಯನ್ನು ಬಿಡುಗಡೆ ಮಾಡುತ್ತಾನೆ ಮತ್ತು ಭೂಕಾಂತೀಯ ಬಿರುಗಾಳಿಗಳು ಹೇಗೆ ಉಂಟಾಗುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಸಂಗತಿಗಳು ನಮಗೆ ನೆರವಾಗಲಿವೆ. ಈ ಭೂಕಾಂತೀಯ ಬಿರುಗಾಳಿಗಳೇ ನಮ್ಮ ಸಂವಹನ ವ್ಯವಸ್ಥೆಗಳಿಗೆ ಅಡ್ಡಿ ಉಂಟುಮಾಡಲಿವೆ" ಎಂದು ಅವರು ಹೇಳಿದರು. ಇದು ಸಂಭವಿಸಿದಲ್ಲಿ ತಿಂಗಳುಗಳು ಅಥವಾ ವರ್ಷಗಳವರೆಗೆ ಇಂಟರ್ನೆಟ್ ಸ್ಥಗಿತವಾಗುವ ಅಪಾಯವಿದೆ ಎನ್ನಲಾಗಿದೆ. ಅಲ್ಲದೆ ಇದರ ಪರಿಣಾಮದಿಂದ ಉಪಗ್ರಹಗಳು ಮತ್ತು ವಿದ್ಯುತ್ ಮಾರ್ಗಗಳು ನಿಷ್ಪ್ರಯೋಜಕವಾಗಬಹುದು.
ಸೌರ ಮಾರುತ ಎಂಬುದು ಸೂರ್ಯನಿಂದ ಹೊರಸೂಸಲ್ಪಟ್ಟ ಚಾರ್ಜ್ ಆಗಿರುವ ಉಪಪರಮಾಣು ಕಣಗಳ ನಿರಂತರ ಸ್ಟ್ರೀಮ್ ಆಗಿದೆ. ಮಾನವಕುಲಕ್ಕೆ ಈ ಹರಿವು ಒಂದು ರೀತಿಯಲ್ಲಿ ಉಪಯೋಗವಾಗಿದ್ದರೆ, ಮತ್ತೊಂದು ರೀತಿಯಲ್ಲಿ ಅನಾನುಕೂಲವಾಗಿದೆ. ನಾವು ಈಗ ಅವಲಂಬಿಸಿರುವ ಜಿಪಿಎಸ್ ಸಂಕೇತಗಳಿಗೆ ಸೌರ ಮಾರುತಗಳು ಅಡ್ಡಿ ಮಾಡಬಹುದು. ಆದರೆ ಸೌರ ಮಾರುತವು ಬೆರಗುಗೊಳಿಸುವ ಉತ್ತರದ ದೀಪಗಳ ಹಿಂದಿನ ಕಾರಣವಾಗಿದೆ. ಹೈಡ್ರೋಜನ್ ಮತ್ತು ಹೀಲಿಯಂ ಸೌರ ಮಾರುತದ ಎರಡು ಪ್ರಮುಖ ಅಂಶಗಳಾಗಿವೆ. ಆ ಎರಡು ಅಂಶಗಳು ಸೂರ್ಯನ ರಾಸಾಯನಿಕ ರಚನೆಯ 98 ಪ್ರತಿಶತವನ್ನು ಪ್ರತಿನಿಧಿಸುತ್ತವೆ ಎಂಬುದು ಗಮನಾರ್ಹ.
ಇದನ್ನೂ ಓದಿ : Cryptocurrency in India: ಕಾಯ್ದೆ ಜಾರಿಯ ನಂತರವೇ ಕ್ರಿಪ್ಟೊಕರೆನ್ಸಿಯಲ್ಲಿ ಹೂಡಿಕೆ ಮಾಡಿ