ಚಿಕ್ಕ ವಯಸ್ಸಿನ ಬಳಕೆದಾರರ ಸುರಕ್ಷತೆಗಾಗಿ, ಅಪ್ರಾಪ್ತರು ಖಾತೆಗಳನ್ನು ರಚಿಸದಂತೆ ತಡೆಗಟ್ಟಲು ಮತ್ತು ದೊಡ್ಡವರು ತಮಗೆ ಅಪರಿಚಿತರಾದ ಚಿಕ್ಕ ಮಕ್ಕಳನ್ನು ಸಂಪರ್ಕಿಸದಂತೆ ತಡೆಗಟ್ಟುವ ಉದ್ದೇಶದಿಂದ ಇನ್ಸ್ಟಾಗ್ರಾಂ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧಾರಿತ ವಯಸ್ಸು ಪರಿಶೀಲನಾ ಸಾಫ್ಟ್‌ವೇರ್ ಸಾಧನವೊಂದನ್ನು ತಯಾರಿಸಿದೆ.
ಆದರೆ ಸದ್ಯಕ್ಕೆ ಈ ಸಾಧನವನ್ನು ಇನ್ಸ್ಟಾಗ್ರಾಂ ಸಂಪೂರ್ಣ ಬಳಕೆಗೆ ತರುತ್ತಿಲ್ಲ. ಈಗ ಬಳಕೆದಾರನೊಬ್ಬನಿಗೆ 18 ವರ್ಷ ವಯಸ್ಸು ತುಂಬಿದೆಯಾ ಅಥವಾ ಇಲ್ಲವಾ ಎಂಬುದನ್ನು ಪರಿಶೀಲಿಸಲು ಮಾತ್ರ ಈ ಸಾಧನ ಬಳಸಲಾಗುವುದು.
ವಯಸ್ಸಿಗೆ ಸಂಬಂಧಿಸಿದ ಮಾಹಿತಿಯು ಇತರ ಬಳಕೆದಾರರಿಗೆ ಕಾಣುವುದಿಲ್ಲ. ಆದರೆ, ಬಳಕೆದಾರನ ವಯಸ್ಸನ್ನು ಆಧರಿಸಿ ಸೂಕ್ತ ಬಳಕೆದಾರ ಅನುಭವ ನೀಡಲು ಮತ್ತು ಸುರಕ್ಷತೆಯನ್ನು ಖಾತರಿಪಡಿಸಲು ಮಾತ್ರ ಈ ಸಾಧನ ಬಳಸಲಾಗುವುದು ಎಂದು ಇನ್ಸ್ಟಾಗ್ರಾಂ ಹೇಳಿದೆ.
ಬಹುತೇಕ ಬಳಕೆದಾರರು ಅಸಲಿ ವಯಸ್ಸಿನ ಮಾಹಿತಿ ನೀಡುತ್ತಾರೆ. ಆದರೆ, ಚಿಕ್ಕ ಮಕ್ಕಳು ತಮ್ಮ ವಯಸ್ಸಿನ ಬಗ್ಗೆ ತಪ್ಪು ಮಾಹಿತಿ ನೀಡುವ ಸಾಧ್ಯತೆಯಿರುತ್ತದೆ. ಆನ್ಲೈನ್ ಮೂಲಕ ಒಬ್ಬರ ವಯಸ್ಸನ್ನು ಗುರುತಿಸುವುದು ಅತ್ಯಂತ ಸಂಕೀರ್ಣ ಪ್ರಕ್ರಿಯೆಯಾಗಿದೆ. ಈ ಸಮಸ್ಯೆಯ ಪರಿಹಾರಕ್ಕಾಗಿ ಮೆಟಾ ಕಂಪನಿಯು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮಶೀನ್ ಲರ್ನಿಂಗ್ ಟೆಕ್ನಾಲಜಿಯನ್ನು ಅಭಿವೃದ್ಧಿಪಡಿಸಿದೆ.
ಅಪ್ರಾಪ್ತ ವಯಸ್ಕರ ವಯಸ್ಸು ಕಂಡುಹಿಡಿಯಲು ಅವರ ಫೇಸ್ ಸ್ಕ್ಯಾನಿಂಗ್ ಮಾಡುವಿಕೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಫೇಸ್ ಸ್ಕ್ಯಾನಿಂಗ್ ಆಪ್ಷನ್ ಬಳಸಬೇಕಾದರೆ ಬಳಕೆದಾರನೊಬ್ಬ ಸೆಲ್ಫಿ ವಿಡಿಯೋ ಅಪ್ಲೋಡ್ ಮಾಡಬೇಕಾಗುತ್ತದೆ. ಈ ವಿಡಿಯೋ ನಂತರ ಯೋಟಿ ಎಂಬ ಕಂಪನಿಗೆ ರವಾನೆಯಾಗುತ್ತದೆ. ಅಲ್ಲಿ ಬಳಕೆದಾರನ ವಯಸ್ಸನ್ನು ಅಂದಾಜಿಸಲಾಗುತ್ತದೆ. ಮಕ್ಕಳು ಆ್ಯಪ್ ಮೇಲೆ ಎಷ್ಟು ಸಮಯ ಕಳೆಯುತ್ತಿದ್ದಾರೆ ಎಂಬುದನ್ನು ಸಹ ಈ ಟೆಕ್ನಾಲಜಿ ಮೂಲಕ ಪಾಲಕರು ನಿಗಾ ಇಡಬಹುದಾಗಿದೆ.