ಚೆನ್ನೈ (ತಮಿಳುನಾಡು):ಬಾಹ್ಯಾಕಾಶದಲ್ಲಿ ಉಪಗ್ರಹ ದಟ್ಟಣೆ, ತ್ಯಾಜ್ಯ ಹೆಚ್ಚಾಗಿರುವ ಮಧ್ಯೆಯೇ ಇಸ್ರೋ ಮಹತ್ವದ ಸಾಧನೆ ತೋರಿದೆ. ಬಾಹ್ಯಾಕಾಶದಲ್ಲಿನ ನಿರುಪಯುಕ್ತ ಉಪಗ್ರಹವೊಂದನ್ನು ಮರಳಿ ಭೂಕಕ್ಷೆಗೆ ತಂದು ಅದನ್ನು ಫೆಸಿಪಿಕ್ ಸಾಗರದಲ್ಲಿ ಬೀಳಿಸುವಲ್ಲಿ ಯಶಸ್ವಿಯಾಗಿದೆ.
ಉಷ್ಣ ವಲಯದ ವಾತಾವರಣ ಮತ್ತು ಹವಾಮಾನ ಅಧ್ಯಯನ ಮಾಡಲು ಫ್ರೆಂಚ್ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಜೊತೆಗೂಡಿ 2011ರಲ್ಲಿ ಉಡಾಯಿಸಲಾದ ಉಪಗ್ರಹವಾದ ಮೇಘಾ ಟ್ರೋಪಿಕ್ಸ್-1 (ಎಂಟಿ-1) ಅನ್ನು ಯಶಸ್ವಿಯಾಗಿ ಕೆಳಗಿಳಿಸಲಾಗಿದೆ. ನಿರೀಕ್ಷಿತ ಅಕ್ಷಾಂಶ ಮತ್ತು ರೇಖಾಂಶದ ಗಡಿಗಳಲ್ಲಿ ಪೆಸಿಫಿಕ್ ಮಹಾಸಾಗರದಲ್ಲಿ ಅದನ್ನು ಪತನಗೊಳಿಸಲಾಗಿದೆ. ಇದು ಅತ್ಯಂತ ಸವಾಲಿನ ಕೆಲಸವಾಗಿತ್ತು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ತಿಳಿಸಿದೆ.
ಮೂರು ವರ್ಷಗಳ ಜೀವಿತಾವಧಿ ಹೊಂದಿದ್ದ ಉಪಗ್ರಹ ದಶಕಗಳವರೆಗೂ ಕಾರ್ಯಾಚರಣೆ ನಡೆಸಿತ್ತು. ಇದೀಗ ಅದು ನಿರುಪಯುಕ್ತವಾಗಿದೆ. ಹೀಗಾಗಿ ಅದನ್ನು ಭೂಮಿಗೆ ಮರಳಿ ತರುವ ನಡೆಸಲಾಯಿತು. ನಿಯಂತ್ರಿತ ವಿಧಾನದ ಮೂಲಕ ಕಳೆದ ವರ್ಷದಿಂದ ಅದರಲ್ಲಿದ್ದ 120 ಕೆಜಿ ಇಂಧನವನ್ನು ದಹಿಸಲಾಯಿತು. ಹಂತಹಂತವಾಗಿ ಉಪಗ್ರಹವನ್ನು ಕಕ್ಷೆ ಬದಲಾವಣೆಗೊಳಿಸಿ, ಆಗಸದ ಹತ್ತಿರ ತಂದು ಅದನ್ನು ಫೆಸಿಪಿಕ್ ಮಹಾಸಾಗರದಲ್ಲಿ ಕೆಡವಲಾಯಿತು ಎಂದು ತಿಳಿಸಿದೆ.
ಇಂಧನ ದಹಿಸಿ, ಕಕ್ಷೆ ಬದಲಿಸಿ ಕಾರ್ಯಾಚರಣೆ:ಅಂತಿಮ ಡಿ-ಬೂಸ್ಟ್ ತಂತ್ರವನ್ನು ಒಳಗೊಂಡಂತೆ ಅನೇಕ ನಿರ್ಬಂಧಗಳನ್ನು ಪರಿಗಣಿಸಿದ ನಂತರ ಈ ಪ್ರಯತ್ನ ನಡೆಸಲಾಯಿತು. ಉಪಗ್ರಹ ಭೂಮಿಗೆ ಮರು ಪ್ರವೇಶದ ಜಾಡು, ಉದ್ದೇಶಿತ ವಲಯದೊಳಗಿನ ಪ್ರಭಾವ ಮತ್ತು ಕಾರ್ಯಾಚರಣೆಯ ಪರಿಸ್ಥಿತಿಗಳು, ಗರಿಷ್ಠ ಒತ್ತಡವನ್ನು ಮೀರಿ ಈ ಮಹತ್ವದ ಕಾರ್ಯಾಚರಣೆ ಪೂರ್ಣಗೊಳಿಸಲಾಗಿದೆ. ಬಾಹ್ಯಾಕಾಶದಲ್ಲಿ ಮುಖ್ಯ ನಿಲ್ದಾಣಗಳಾದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ, ಚೀನೀ ಬಾಹ್ಯಾಕಾಶ ಕೇಂದ್ರಗಳ ವಿಜ್ಞಾನಿಗಳು ನಡೆಸದ ವಿಧಾನವನ್ನು ಬಳಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ.