ಚೆನ್ನೈ, ತಮಿಳುನಾಡು :ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ 2019ರಲ್ಲಿ ಚಂದ್ರನ ಮೇಲೆ ಸಂಶೋಧನೆಗೆ ಉಡಾವಣೆ ಮಾಡಿದ್ದ ಚಂದ್ರಯಾನ -2 ಆರ್ಬಿಟರ್ ಮತ್ತು ಅಮೆರಿಕ ನಾಸಾ ಹಾರಿಬಿಟ್ಟಿದ್ದ ಲೂನಾರ್ ರಿಕನೈಸನ್ಸ್ ಆರ್ಬಿಟರ್ನಲ್ಲಿದ್ದ (LRO-Lunar Reconnaissance Orbiter) ಬಾಹ್ಯಾಕಾಶ ನೌಕೆಗಳು ಪರಸ್ಪರ ಡಿಕ್ಕಿಯಾಗುವುದರಿಂದ ಪಾರಾಗಿವೆ.
ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡ ಕಾರಣದಿಂದಾಗಿ ಬಾಹ್ಯಾಕಾಶ ನೌಕೆಗಳು ಪರಸ್ಪರ ಡಿಕ್ಕಿಯಾಗುವುದನ್ನು ತಪ್ಪಿಸಲಾಗಿದೆ. ಅಕ್ಟೋಬರ್ 20ರಂದು ಚಂದ್ರಯಾನ-2 ಮತ್ತು ನಾಸಾದ ಲೂನಾರ್ ರಿಕನೈಸನ್ಸ್ ಆರ್ಬಿಟರ್ನ ಬಾಹ್ಯಾಕಾಶ ನೌಕೆಗಳು ಸಮೀಪಕ್ಕೆ ಬರುತ್ತವೆ ಎಂದು ಊಹಿಸಲಾಗಿತ್ತು ಎಂದು ಇಸ್ರೋ ( Indian Space Research Organisation) ಅಧಿಕೃತ ಹೇಳಿಕೆ ನೀಡಿದೆ.
ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ (ಜೆಪಿಎಲ್- Jet Propulsion Laboratory) ಮತ್ತು ಇಸ್ರೋ ಮಾಡಿದ ಲೆಕ್ಕಾಚಾರಗಳ ಪ್ರಕಾರ ಉಭಯ ಬಾಹ್ಯಾಕಾಶ ನೌಕೆಗಳ ಕಕ್ಷೆಗಳ ಅಂತರ 100 ಮೀಟರ್‌ಗೂ ಕಡಿಮೆಯಾಗುತ್ತಿತ್ತು. ಅಕ್ಟೋಬರ್ 20ರ ಬೆಳಗ್ಗೆ 11 ಗಂಟೆ ವೇಳೆಗೆ ಎರಡು ಬಾಹ್ಯಾಕಾಶ ನೌಕೆಗಳ ಅಂತರ ಕೇವಲ 3 ಕಿಲೋಮೀಟರ್ ಆಗಿರುತ್ತದೆ ಎಂದು ಲೆಕ್ಕಾಚಾರ ಮಾಡಲಾಗಿತ್ತು. ಎರಡೂ ಬಾಹ್ಯಾಕಾಶ ನೌಕೆಗಳು ವೇಗವಾಗಿ ಚಲಿಸುವ ಕಾರಣ, ಇದು ಅತ್ಯಂತ ಕಡಿಮೆ ಅಂತರವಾಗಿದ್ದು, ಡಿಕ್ಕಿಯಾಗುವ ಸಾಧ್ಯತೆ ಇತ್ತು.