ವಾಷಿಂಗ್ಟನ್: ಭಾರತೀಯ ಮೂಲದ ಸಾಫ್ಟ್‌ವೇರ್ ಮತ್ತು ರೊಬೊಟಿಕ್ಸ್ ಎಂಜಿನಿಯರ್ ಅಮಿತ್ ಕ್ಷತ್ರಿಯ ಅವರು ವಾಷಿಂಗ್ಟನ್‌ನಲ್ಲಿರುವ ನಾಸಾದ ಪ್ರಧಾನ ಕಚೇರಿಯಲ್ಲಿರುವ ಹೊಸ 'ಚಂದ್ರನಿಂದ ಮಂಗಳ ಯೋಜನೆ'ಯ ಮೊದಲ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಮಾನವಕುಲಕ್ಕೆ ಉಪಯೋಗ ಕಲ್ಪಿಸುವ ನಿಟ್ಟಿನಲ್ಲಿ ಚಂದ್ರ ಮತ್ತು ಮಂಗಳದಲ್ಲಿ ನಾಸಾದ ಮಾನವ ಪರಿಶೋಧನಾ ಚಟುವಟಿಕೆಗಳನ್ನು ಕೈಗೊಳ್ಳುವ ಗುರಿಯನ್ನು ಈ ಹೊಸ ಯೋಜನೆ ಹೊಂದಿದೆ.
ಮೂನ್ ಟು ಮಾರ್ಸ್ ಪ್ರೋಗ್ರಾಂ ಕಚೇರಿಯು ಚಂದ್ರನತ್ತ ನಮ್ಮ ದಿಟ್ಟ ಕಾರ್ಯಾಚರಣೆಗಳಿಗಾಗಿ ನಾಸಾವನ್ನು ಸಜ್ಜುಗೊಳಿಸಲು ಸಹಾಯ ಮಾಡುತ್ತದೆ ಮತ್ತು ಮಂಗಳ ಗ್ರಹದಲ್ಲಿ ಮೊದಲ ಮಾನವರನ್ನು ಇಳಿಸಲು ಸಹಾಯ ಮಾಡುತ್ತದೆ ಎಂದು ನಾಸಾ ಆಡಳಿತಾಧಿಕಾರಿ ಬಿಲ್ ನೆಲ್ಸನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸಂಶೋಧನೆಯ ಸುವರ್ಣಯುಗವು ಇದೀಗ ನಡೆಯುತ್ತಿದೆ ಮತ್ತು ಈ ಹೊಸ ಕಚೇರಿಯು ಮಂಗಳ ಗ್ರಹಕ್ಕೆ ಮಾನವರು ದಾಪುಗಾಲಿಡಲು ಅಗತ್ಯವಾದ ದೀರ್ಘಾವಧಿಯಲ್ಲಿ ಬಾಹ್ಯಾಕಾಶದಲ್ಲಿರಲು ಬೇಕಾದ ವ್ಯವಸ್ಥೆಯನ್ನು ಯಶಸ್ವಿಯಾಗಿ ಸ್ಥಾಪಿಸಲು ಸಹಾಯ ಮಾಡುತ್ತದೆ ಎಂದು ಅವರು ತಿಳಿಸಿದರು.
2022ರ ನಾಸಾ ಅಧಿಕಾರ ಕಾಯಿದೆಯ ನಿರ್ದೇಶನದಂತೆ, ಮೂನ್ ಟು ಮಾರ್ಸ್ ಪ್ರೋಗ್ರಾಂ ಆಫೀಸ್ ಹಾರ್ಡ್‌ವೇರ್ ಡೆವಲಪ್‌ಮೆಂಟ್, ಮಿಷನ್ ಇಂಟಿಗ್ರೇಷನ್ ಮತ್ತು ರಿಸ್ಕ್ ಮ್ಯಾನೇಜ್‌ಮೆಂಟ್ ಫಂಕ್ಷನ್‌ಗಳ ಮೇಲೆ ಗಮನ ಕೇಂದ್ರೀಕರಿಸಲಿದೆ. ಇದು ವೈಜ್ಞಾನಿಕ ಅನ್ವೇಷಣೆಯ ಹೊಸ ಯುಗವನ್ನು ತೆರೆಯಲು ಚಂದ್ರನಲ್ಲಿ ಆರ್ಟೆಮಿಸ್ ಮಿಷನ್‌ಗಳನ್ನು ಬಳಸುವ ಏಜೆನ್ಸಿಯ ಪರಿಶೋಧನಾ ವಿಧಾನಕ್ಕೆ ಮತ್ತು ಮಂಗಳ ಗ್ರಹಕ್ಕೆ ಮಾನವ ಕಾರ್ಯಾಚರಣೆಗಳ ತಯಾರಿಗೆ ನಿರ್ಣಾಯಕವಾಗಿದೆ. ಇದು ಬಾಹ್ಯಾಕಾಶ ಉಡಾವಣಾ ವ್ಯವಸ್ಥೆಯ ರಾಕೆಟ್, ಓರಿಯನ್ ಬಾಹ್ಯಾಕಾಶ ನೌಕೆ, ಗ್ರೌಂಡ್ ಸಪೋರ್ಟ್ ಸಿಸ್ಟಮ್, ಮಾನವ ಲ್ಯಾಂಡಿಂಗ್ ವ್ಯವಸ್ಥೆಗಳು, ಸ್ಪೇಸ್‌ಸೂಟ್‌ಗಳು, ಗೇಟ್‌ವೇ ಮತ್ತು ಆಳವಾದ ಬಾಹ್ಯಾಕಾಶ ಪರಿಶೋಧನೆಗೆ ಸಂಬಂಧಿಸಿದ ಇನ್ನೂ ಹಲವಾರು ವಿಷಯಗಳನ್ನು ಒಳಗೊಂಡಿದೆ.