ಕರ್ನಾಟಕ

karnataka

ETV Bharat / science-and-technology

ಭಾರತದಲ್ಲಿ ನಿಧಾನವಾಗಿ ಹೆಚ್ತಿದೆ ಕಾರುಗಳ ಸಂಖ್ಯೆ; ಜಾಗತಿಕವಾಗಿ ಇದು ಕಡಿಮೆಯೇ! - ವಾಯು ಮಾಲಿನ್ಯವನ್ನು ಕಡಿಮೆ ಮಾಡಲು

ಜಾಗತಿಕವಾಗಿ ಅಭಿವೃದ್ಧಿ ಹೊಂದಿದ ದೇಶದಲ್ಲಿ ಕಾರಿನ ಮಾಲೀಕತ್ವ ಹೆಚ್ಚಿದ್ದು, ಇದರಿಂದ ಹಸಿರು ಮನೆ ಪರಿಣಾಮ ಉಂಟಾಗುತ್ತಿದೆ.

Indian car ownership surging
Indian car ownership surging

By ETV Bharat Karnataka Team

Published : Sep 22, 2023, 11:03 AM IST

ಬೆಂಗಳೂರು: ಸೆಪ್ಟೆಂಬರ್​ 22ರ ದಿನವನ್ನು 'ವಿಶ್ವ ಕಾರು​​ ಮುಕ್ತ ದಿನ'ವನ್ನಾಗಿ ಘೋಷಿಸಲಾಗಿದೆ. ಒಂದು ದಿನ ಕಾರಿನಿಂದ ದೂರ ಇರುವಂತೆ ಪ್ರೋತ್ಸಾಹಿಸುವುದು, ವಾಯುಮಾಲಿನ್ಯ ತಗ್ಗಿಸುವುದು ಮತ್ತು ನಡಿಗೆ ಮತ್ತು ಸೈಕಲ್​ ಸವಾರಿಯಂತಹ ಅಭ್ಯಾಸ ರೂಢಿಸಿಕೊಂಡು ಪರಿಸರದ ಸುರಕ್ಷತೆಯ ಸಂದೇಶ ರವಾನಿಸುವುದು ಇದರ ಹಿಂದಿನ ಉದ್ದೇಶ. ಅಧ್ಯಯನಗಳು ಹೇಳುವಂತೆ, ನಗರದಲ್ಲಿ ಕಾರು ಬಳಕೆಗಿಂತ ಸೈಕಲ್​ ಸವಾರಿ ಮೂಲಕವೇ ಬೇಗ ಉದ್ದೇಶಿತ ಸ್ಥಳ ತಲುಪಬಹುದಂತೆ.

ವರ್ಲ್ಡ್​ ಕಾರ್​ ಫ್ರೀ ನೆಟ್​ವರ್ಕ್​ ಹೇಳುವಂತೆ, ವಿಶ್ವ ಕಾರು ಮುಕ್ತ ದಿನದ ಮತ್ತೊಂದು ಪ್ರಮುಖ ಉದ್ದೇಶವೇನೆಂದರೆ, ವರ್ಷವಿಡೀ ಕಾರುಗಳ ಗಿಜಿಗುಡುವ ಸದ್ದು, ಹೊಗೆಯಿಂದ ಮುಕ್ತಗೊಳಿಸಿ ಒಂದು ದಿನವಾದರೂ ನಗರವನ್ನು ಕಾಣುವುದು. ಪ್ರತಿ ವರ್ಷ ಸೆಪ್ಟೆಂಬರ್​ 16ರಿಂದ 22ರವರೆಗೆ ಯುರೋಪಿನ ಜನರು ಈ ಉದ್ದೇಶಕ್ಕೆ ಬದ್ಧರಾಗಿ ಸುಸ್ಥಿರ ನಗರ ಸಾರಿಗೆ ಬಳಕೆಗೆ ಮುಂದಾಗುತ್ತಾರೆ. ಕಾರುಗಳಿಲ್ಲದ ಕಿರಿದಾದ ರಸ್ತೆಗಳನ್ನು ಹೇಗೆ ವಿಭಿನ್ನವಾಗಿ ಬಳಸಬಹುದು ಎಂಬುದೂ ಇದರ ಮತ್ತೊಂದು ಪ್ರಯೋಜನವಾಗಿದೆ.

ಇತಿಹಾಸ: 1973ರಲ್ಲಿ ಪೆಟ್ರೋಲಿಯಂ ಬಿಕ್ಕಟ್ಟು ಸಂಭವಿಸಿದಾಗ ಮತ್ತು ಪರಿಸರ ಮಾಲಿನ್ಯ ತಗ್ಗಿಸುವ ಆಲೋಚನೆಯೇ ಈ ದಿನದ ಉದಯಕ್ಕೆ ಪ್ರೇರಣೆ. 90ರ ದಶಕದಲ್ಲಿ ಕಾರುಗಳ ಸಂಖ್ಯೆ ಅತಿ ಹೆಚ್ಚಾದಾಗ ವಿಶ್ವಾದ್ಯಂತ ಕಾರು ಮುಕ್ತ ದಿನ ಆಚರಣೆ ನಡೆಸಲಾಯಿತು.

1997ರಲ್ಲಿ ಮೊದಲ ಬಾರಿ ಬ್ರಿಟನ್​ನ ಎನ್ವಿರಾನ್ಮೆಂಟಲ್​ ಟ್ರಾನ್ಸ್​​ಪೋರ್ಟ್​ ಅಸೋಸಿಯೇಷನ್​ ರಾಷ್ಟ್ರೀಯ ಅಭಿಯಾನ ಶುರುಮಾಡಿತು. 2000ರಲ್ಲಿ ಕಾರು​ ಮುಕ್ತ ದಿನ ಜಾಗತಿಕವಾಗಿ ಮನ್ನಣೆ ಪಡೆದು ಕಾರ್ಬಸ್ಟರ್​​ ವಿಶ್ವ ಕಾರು ​ಮುಕ್ತ ದಿನದ ಕಾರ್ಯಕ್ರಮ ಉದ್ಘಾಟಿಸಿದರು.

ಪ್ರಯೋಜನಗಳು: ಕಾರು ಬಳಕೆಯನ್ನು ನಿಲ್ಲಿಸುವುದರಿಂದ ಮಾಲಿನ್ಯ ತಗ್ಗುತ್ತದೆ. ಹಸಿರು ಮನೆ ಪರಿಣಾಮಕ್ಕೆ ಕಾರುಗಳ ಕೊಡುಗೆ ಹೆಚ್ಚು. ಪರಿಸರ ಬದಲಾವಣೆಗೆ ಕಾರಣವಾಗುವ ಅಂಶಗಳಲ್ಲಿ ಇದೂ ಒಂದು. ಕಾರುಗಳ ಉತ್ಪಾದನೆಗೆ ಹೆಚ್ಚಿನ ಸಂಪನ್ಮೂಲದ ಅವಶ್ಯಕತೆ ಬೇಕಿದೆ. ಕಾರು ಮುಕ್ತ ದಿನ ಆಚರಿಸುವ ಮೂಲಕ ಜನರಲ್ಲಿ ಕ್ರಿಯಾಶೀಲ ಮತ್ತು ಆರೋಗ್ಯಕರ ಜೀವನಶೈಲಿ ರೂಢಿಸಲಾಗುವುದು. ಇದು ಟ್ರಾಫಿಕ್​ನಲ್ಲಿ ಸಮಯ ಕಳೆಯುವ ಅವಧಿಯನ್ನು ಕಡಿಮೆ ಮಾಡುವುದರೊಂದಿಗೆ ಸಾರ್ವಜನಿಕ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ವಾಯು, ಶಬ್ದ ಮಾಲಿನ್ಯವನ್ನೂ ತಗ್ಗಿಸುತ್ತದೆ.

ಭಾರತದಲ್ಲಿ ಕಾರು ಬಳಕೆ: ಜಾಗತಿಕವಾಗಿ ಪರಿಗಣಿಸಿದಾಗ ಭಾರತದಲ್ಲಿ ಕಾರಿನ ಮಾಲೀಕತ್ವ ಸಂಖ್ಯೆ ಕಡಿಮೆಯೇ ಇದೆ. ನೀತಿ ಆಯೋಗದ ಹಿರಿಯ ಅಧಿಕಾರಿ ಅಮಿತಾಬ್​ ಕಾಂತ್​ ಮಾತನಾಡುತ್ತಾ, ಜಾಗತಿಕ ಗುಣಮಟ್ಟಕ್ಕೆ ಹೋಲಿಕೆ ಮಾಡಿದರೆ, ಭಾರತದಲ್ಲಿನ ಕಾರು ಮಾಲೀಕರ ಸಂಖ್ಯೆ ಕಡಿಮೆ ಇದೆ. 2018ರಲ್ಲಿ ಪ್ರತಿ ಸಾವಿರ ಮಂದಿಗೆ 22 ಜನರು ಕಾರಿನ ಮಾಲೀಕತ್ವ ಹೊಂದಿದ್ದರು. ಈ ಸಮಯದಲ್ಲಿ ಅಮೆರಿಕದಲ್ಲಿ 980, ಬ್ರಿಟನ್​ನಲ್ಲಿ 850, ನ್ಯೂಜಿಲ್ಯಾಂಡ್​​ 774, ಆಸ್ಟ್ರೇಲಿಯಾ 740, ಕೆನಡಾ 662, ಜಪಾನ್​ 591, ಚೀನಾದಲ್ಲಿ 164 ಮಂದಿ ಕಾರಿನ ಮಾಲೀಕರಿದ್ದರು.

ಇಂಟರ್​ನ್ಯಾಷನಲ್​​ ಎನರ್ಜಿ ಏಜೆನ್ಸಿ ಪ್ರಕಾರ, 2040ರ ವೇಳೆಗೆ ಭಾರತದಲ್ಲೂ ಕಾರಿನ ಮಾಲೀಕತ್ವ ಸಂಖ್ಯೆ ಹೆಚ್ಚಲಿದ್ದು, ಪ್ರತಿ ಸಾವಿರ ಮಂದಿಗೆ 775 ಮಂದಿ ಮಾಲೀಕರಿರಲಿದ್ದಾರೆ ಎಂದು ತಿಳಿಸಿದೆ. 2020ರ ಡಿಸೆಂಬರ್​ನಲ್ಲಿ ಬಿಡುಗಡೆಯಾದ ಎನ್​ಎಫ್​ಎಚ್​ಎಸ್​-5 ವರದಿ ಅನುಸಾರ ಭಾರತದಲ್ಲಿ ಶೇ 8ರಷ್ಟು ಮಂದಿ ಕಾರನ್ನು ಹೊಂದಿದ್ದು ಅಂದಾಜು 12ರಲ್ಲಿ ಒಂದು ಮನೆಯಲ್ಲಿ ಕಾರಿನ ಮಾಲೀಕರಿದ್ದಾರೆ. ಇದಕ್ಕೆ ವಿರುದ್ಧವಾಗಿ ಭಾರತದಲ್ಲಿ ಶೇ 55ರಷ್ಟು ಕುಟುಂಬದಲ್ಲಿ ಸೈಕಲ್​ ಮಾಲೀಕರಿದ್ದರೆ, ಶೇ 54ರಷ್ಟು ಮಂದು ದ್ವಿಚಕ್ರ ವಾಹನದ ಮಾಲೀಕರಾಗಿದ್ದಾರೆ.

ಜಾಗತಿಕ ಅಂಕಿಅಂಶದ ಮಾಹಿತಿಯಂತೆ ಭಾರತೀಯರು ತಮ್ಮ ಉದ್ಯೋಗ ಸ್ಥಳಕ್ಕೆ ಪ್ರತಿನಿತ್ಯ ಓಡಾಡುವ ದೂರ ಸರಿಸುಮಾರು 5 ಕಿ.ಮೀ ಒಳಗೆ ಇರುತ್ತದೆ. ಅದೇ ಅಮೆರಿಕದಲ್ಲಿ 26 ಕಿ.ಮೀ ದೂರದ ಓಡಾಟ ನಡೆಸುತ್ತಾರೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ಟೆಸ್ಲಾ ಕಾರ್​​​​ನಲ್ಲಿ ಹ್ಯಾಂಡ್ಸ್ ಫ್ರೀ ಡ್ರೈವಿಂಗ್‌ಗಾಗಿ ಎಲೋನ್​​ ಮೋಡ್​... ಏನಿದು ಹೊಸ ವೈಶಿಷ್ಟ್ಯ

ABOUT THE AUTHOR

...view details