ನವದೆಹಲಿ: ಕೌಂಟರ್‌ಪಾಯಿಂಟ್ ರಿಸರ್ಚ್ ಬಿಡುಗಡೆ ಮಾಡಿದ ಸಂಶೋಧನೆಯ ಪ್ರಕಾರ ಪ್ರಸಕ್ತ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಭಾರತವು ಆ್ಯಪಲ್‌ನ ಐದನೇ ಅತಿದೊಡ್ಡ ಐಫೋನ್ ಮಾರುಕಟ್ಟೆಯಾಗಿದೆ. ಇದರ ಪರಿಣಾಮವಾಗಿ ಭಾರತವು ಐಫೋನ್ ಮಾರಾಟದಲ್ಲಿ ಜರ್ಮನಿ ಮತ್ತು ಫ್ರಾನ್ಸ್ ಅನ್ನು ಮೀರಿಸಿದೆ. ಐಫೋನ್ ಮಾರಾಟದಲ್ಲಿ ಭಾರತವು ಈಗ U.K., ಜಪಾನ್, ಚೀನಾ ಮತ್ತು ಅಮೆರಿಕದ ನಂತರದ ಸ್ಥಾನದಲ್ಲಿದೆ.
2023 ರ ಮೊದಲಾರ್ಧದಲ್ಲಿ ಭಾರತದಲ್ಲಿ ಆ್ಯಪಲ್ ಐಫೋನ್ ಮಾರಾಟ ಶೇಕಡಾ 68 ರಷ್ಟು (ವರ್ಷದಿಂದ ವರ್ಷಕ್ಕೆ) ಏರಿಕೆಯಾಗಿದೆ ಎಂದು ವರದಿ ತಿಳಿಸಿವೆ. iPhone 14 ಮತ್ತು iPhone 13 ಸರಣಿಗಳ ಫೋನ್ಗಳ ಅತ್ಯಧಿಕ ಮಾರಾಟದಿಂದ ಈ ವೃದ್ಧಿ ಕಂಡು ಬಂದಿದೆ. ಎರಡನೇ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್ ಅವಧಿ) ಒಂದರಲ್ಲಿಯೇ ಆ್ಯಪಲ್ ಐಫೋನ್ ಮಾರಾಟದಲ್ಲಿ ಅತ್ಯಧಿಕ ಬೆಳವಣಿಗೆ ಕಂಡು ಬಂದಿದೆ. ಕಂಪನಿಯು ದೇಶದಲ್ಲಿ ಮೊಬೈಲ್ ಮಾರಾಟದಲ್ಲಿ ಶೇಕಡಾ 68 ರಷ್ಟು ಅದ್ಭುತ ಬೆಳವಣಿಗೆ ದಾಖಲಿಸಿದೆ ಎಂದು ಸೈಬರ್ ಮೀಡಿಯಾ ರಿಸರ್ಚ್ (ಸಿಎಂಆರ್) ಹೇಳಿದೆ.
ಜೊತೆಗೆ Apple iPad ಕೂಡ ವರ್ಷದಿಂದ ವರ್ಷಕ್ಕೆ ಸರಾಸರಿ ಶೇಕಡಾ 6 ರಷ್ಟು ಬೆಳವಣಿಗೆ ದಾಖಲಿಸಿದೆ. ಆ್ಯಪಲ್ ಮಾರುಕಟ್ಟೆ ಬೇಡಿಕೆಯನ್ನು ಬಂಡವಾಳ ಮಾಡಿಕೊಳ್ಳಲು ಮತ್ತು ಭಾರತದಲ್ಲಿ ತನ್ನ ಧನಾತ್ಮಕ ಆವೇಗವನ್ನು ಕಾಪಾಡಿಕೊಳ್ಳಲು ಉತ್ತಮ ಸ್ಥಾನದಲ್ಲಿದೆ ಮತ್ತು CMR ಪ್ರಕಾರ 2023 ರಲ್ಲಿ 7 ಶೇಕಡಾ ಮಾರುಕಟ್ಟೆ ಪಾಲನ್ನು ಗಳಿಸುವ ಸಾಧ್ಯತೆಯಿದೆ.
ಭಾರತ ಸೆಲ್ಯುಲಾರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ (ICEA) ದತ್ತಾಂಶದ ಪ್ರಕಾರ, ಸರ್ಕಾರದ ಸ್ನೇಹಪರ ನೀತಿಗಳು ಮತ್ತು ಉತ್ಪಾದನಾ-ಸಂಯೋಜಿತ ಪ್ರೋತ್ಸಾಹ (PLI) ಯೋಜನೆಯಿಂದ ಉತ್ತೇಜಿತವಾಗಿರುವ ಭಾರತದ ಮಾರುಕಟ್ಟೆಯಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ (FY24) ಮೊಬೈಲ್ ರಫ್ತು 1,20,000 ಕೋಟಿ ರೂಪಾಯಿಗಳನ್ನು ದಾಟಲಿದೆ ಎಂದು ತಿಳಿದು ಬಂದಿದೆ. ಮೊಬೈಲ್ ರಫ್ತುಗಳಲ್ಲಿನ ಈ ಅದ್ಭುತ ಬೆಳವಣಿಗೆಯ ನಡುವೆ, ಹಣಕಾಸು ವರ್ಷ 2024 ರಲ್ಲಿ ಆ್ಯಪಲ್‌ನ ಪಾಲು ಶೇಕಡಾ 50 ಕ್ಕಿಂತ ಹೆಚ್ಚಾಗಿರುತ್ತದೆ.
ಮೇ ತಿಂಗಳಲ್ಲಿ ಐಫೋನ್ ರಫ್ತು ದಾಖಲೆಯ 10,000 ಕೋಟಿ ರೂ.ಗಳನ್ನು ತಲುಪಿದೆ. ಇದರೊಂದಿಗೆ ದೇಶದಿಂದ ಒಟ್ಟು ರಫ್ತಾದ ಮೊಬೈಲ್ ಮೌಲ್ಯ ರೂ.12,000 ಕೋಟಿಗೆ ತಲುಪಿದೆ. ಭಾರತೀಯ ಸ್ಮಾರ್ಟ್‌ಫೋನ್ ಉದ್ಯಮದಲ್ಲಿನ ಬೆಳವಣಿಗೆಯು ಪ್ರಾಥಮಿಕವಾಗಿ ಆ್ಯಪಲ್ನಿಂದಲೇ ಮುನ್ನಡೆಸಲ್ಪಟ್ಟಿದೆ. ಏಪ್ರಿಲ್‌ನಲ್ಲಿ ಆ್ಯಪಲ್ ತನ್ನ ಮೊದಲ ಭೌತಿಕ ಮಳಿಗೆಗಳನ್ನು ರಾಜಧಾನಿ ದೆಹಲಿ ಮತ್ತು ಮುಂಬೈ ನಗರಗಳಲ್ಲಿ ತೆರೆದಿತ್ತು.
ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಚೀನಾದ ಶಿಯೋಮಿ ಮತ್ತು ಸ್ಯಾಮ್‌ಸಂಗ್‌ನ ಕಡಿಮೆ ಬೆಲೆಯ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಸಾಕಷ್ಟು ಜನಪ್ರಿಯವಾಗಿವೆ. ಆದಾಗ್ಯೂ, ಪ್ರೀಮಿಯಂ ಸ್ಮಾರ್ಟ್ ಫೋನ್ ವಿಭಾಗದಲ್ಲಿ ಬೆಳವಣಿಗೆ ಕಂಡು ಬಂದಿದೆ. ಕೌಂಟರ್‌ಪಾಯಿಂಟ್ ರಿಸರ್ಚ್ ಪ್ರಕಾರ $400 ಕ್ಕಿಂತ ಹೆಚ್ಚಿನ ಬೆಲೆಯ ಸ್ಮಾರ್ಟ್‌ಫೋನ್‌ಗಳು ಈಗ ಒಟ್ಟು ಹ್ಯಾಂಡ್‌ಸೆಟ್‌ಗಳ ಶೇಕಡಾ 10 ರಷ್ಟು ಪಾಲನ್ನು ಹೊಂದಿವೆ.
ಇದನ್ನೂ ಓದಿ : ಫಾಸ್ಟ್ ಚಾರ್ಜಿಂಗ್ ಸ್ಮಾರ್ಟ್‌ಫೋನ್ ಮಾರಾಟ ಹೆಚ್ಚಳ; ಚೀನಿ ಬ್ರ್ಯಾಂಡ್ಗಳು ಮುಂಚೂಣಿಯಲ್ಲಿ