ನವದೆಹಲಿ:ಭಾರತ ಬಾಹ್ಯಾಕಾಶ ವಲಯದಲ್ಲಿಯೂ ಸಾಕಷ್ಟು ಅಭಿವೃದ್ಧಿಯಾಗುತ್ತಿದೆ. ಕೆಲವು ದಶಕಗಳ ಹಿಂದೆ ಭಾರತದ ಉಪಗ್ರಹ ಉಡಾವಣೆ ಮಾಡಲು ಬೇರೆ ರಾಷ್ಟ್ರಗಳ ಸಹಕಾರವನ್ನು ಯಾಚಿಸುತ್ತಿದ್ದ ಭಾರತ ಈಗ ಬೇರೆ ರಾಷ್ಟ್ರಗಳ ಉಪಗ್ರಹಗಳನ್ನು ಹಾರಿಸುವ ಮೂಲಕ ಆದಾಯ ಗಳಿಸುತ್ತಿದೆ.
ಹೌದು, ಬೇರೆ ಬೇರೆ ದೇಶಗಳ ಉಪಗ್ರಹಗಳನ್ನು ನಭಕ್ಕೆ ಉಡಾವಣೆ ಮಾಡುವ ಮೂಲಕ ಭಾರತ 35 ಮಿಲಿಯನ್ ಡಾಲರ್ ಮತ್ತು 10 ಮಿಲಿಯನ್ ಯೂರೋ ವಿದೇಶಿ ವಿನಿಮಯ ಆದಾಯವನ್ನು ಗಳಿಸಿದೆ.
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಲೋಕಸಭೆಗೆ ಈ ಮಾಹಿತಿಯನ್ನು ನೀಡಿದ್ದು, ಇಸ್ರೋದ ಪಿಎಸ್ಎಲ್ವಿ ರಾಕೆಟ್ಗ ಮೂಲಕ ವಿದೇಶದ ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಮೂರು ವರ್ಷಗಳಲ್ಲಿ ಒಟ್ಟು 349 ಕೋಟಿ ರೂಪಾಯಿ ವಿದೇಶಿ ವಿನಿಮಯ ಸಂಗ್ರಹಿಸಿದೆ ಎಂದಿದ್ದಾರೆ.
45 ಅಂತಾರಾಷ್ಟ್ರೀಯ ಗ್ರಾಹಕ ಉಪಗ್ರಹಗಳನ್ನು ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್ಎಸ್ಐಎಲ್) ಮೂಲಕ ಉಡಾವಣೆ ಮಾಡಲಾಗಿದ್ದು, ಹಲವು ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ ಎಂದಿದ್ದಾರೆ.
ಜಾಗತಿಕವಾಗಿ ಬ್ರಾಡ್‌ಬ್ಯಾಂಡ್ ಸಂವಹನ ಅಗತ್ಯತೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎನ್ಎಸ್ಐಎಲ್ ಇಸ್ರೋದ ಎಸ್ಎಸ್ಎಲ್ವಿ, ಪಿಎಸ್ಎಲ್ವಿ ಮತ್ತು ಜಿಎಸ್ಎಲ್ವಿ -ಎಂಕೆ3 ರಾಕೆಟ್ಗಳ ಮೂಲಕ ವಿದೇಶಿ ಉಪಗ್ರಹಗಳನ್ನು ಉಡಾವಣೆ ಮಾಡುತ್ತಿದೆ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.
ಎನ್ಎಸ್ಐಎಲ್, ವಿವಿಧ ಅಂತಾರಾಷ್ಟ್ರೀಯ ಸಮ್ಮೇಳನಗಳು ಮತ್ತು ಪ್ರದರ್ಶನಗಳಲ್ಲಿ ಭಾಗವಹಿಸುವ ಮೂಲಕ, ಅಂತಾರಾಷ್ಟ್ರೀಯ ಕಂಪನಿಗಳನ್ನು ಆಕರ್ಷಿಸುತ್ತಿದೆ. ಈ ಮೂಲಕ ವಿದೇಶಿ ವಿನಿಮಯ ಆದಾಯ ಗಳಿಕೆಯನ್ನು ಹೆಚ್ಚಿಸಿಕೊಳ್ಳುತ್ತಿದೆ.
ವಿದೇಶಗಳಿಗೆ ಹಲವಾರು ಸೇವೆಗಳನ್ನು ಒದಗಿಸುವ ಭೂ ವೀಕ್ಷಣೆ ಮತ್ತು ಸಂವಹನ ಉಪಗ್ರಹಗಳನ್ನು ನಿರ್ಮಿಸಿ, ಉಡಾವಣೆ ಮಾಡಲು ಮುಂದಾಗಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತಷ್ಟು ಸುಧಾರಣೆಗಳನ್ನು ಮಾಡುವ ಸಲುವಾಗಿ ಖಾಸಗಿ ಕಂಪನಿಗಳಿಗೂ ಅವಕಾಶ ನೀಡಲಾಗುತ್ತದೆ. ಇದಕ್ಕಾಗಿ ಇನ್-ಸ್ಪೇಸ್ ( IN-SPACe) ಎಂಬ ಸಂಸ್ಥೆಯನ್ನ ಹುಟ್ಟುಹಾಕಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಭಾರತ ತನ್ನ ಪ್ರಭಾವ ಬಳಸಿ, ಯುದ್ಧ ನಿಲ್ಲುವಂತೆ ಮಾಡಲಿ: ಉಕ್ರೇನ್ ಸಚಿವ