ನವದೆಹಲಿ : ಯಾವುದೇ ಹೊಸ ಕೋವಿಡ್ ತಳಿಗೆ ಲಸಿಕೆಯನ್ನು ಅಭಿವೃದ್ಧಿಪಡಿಸಲು ಭಾರತ ಸಮರ್ಥವಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಹಾನಿರ್ದೇಶಕ ರಾಜೀವ್ ಬಹ್ಲ್ ಶುಕ್ರವಾರ ತಿಳಿಸಿದರು. "ಪ್ರಸ್ತುತ ಹಿಂದಿನ ಒಮಿಕ್ರಾನ್‌ಗಿಂತ ಹೆಚ್ಚು ತೀವ್ರವಾದ ಯಾವುದೇ ತಳಿ ಕಾಣಿಸಿಕೊಂಡಿಲ್ಲ" ಎಂದು ಬಹ್ಲ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಆದರೆ ವೈರಸ್ ಇನ್ನೂ ಸಂಪೂರ್ಣ ನಾಶವಾಗಿಲ್ಲ ಎಂಬುದನ್ನು ಇದೇ ಸಂದರ್ಭದಲ್ಲಿ ಒತ್ತಿ ಹೇಳಿದರು.
"ಹೊಸ ತಳಿಯ ಹರಡುವಿಕೆ ಸಾಮರ್ಥ್ಯ, ತೀವ್ರತೆ (ಅಂದರೆ ವೈರಸ್ನಿಂದ ಸಾವಿನ ಪ್ರಮಾಣ ಮತ್ತು ಆಸ್ಪತ್ರೆಗೆ ದಾಖಲಾಗುವ ಪ್ರಮಾಣ) ಮತ್ತು ಅದು ರೋಗನಿರೋಧಕ ಶಕ್ತಿಯಿಂದ ಅದು ಹೇಗೆ ಪಾರಾಗುತ್ತದೆ ಎಂಬುದನ್ನು ನಾವು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಅಗತ್ಯವಿದ್ದರೆ ಹೊಸ ತಳಿಗೆ ಅನುಗುಣವಾಗಿ ಲಸಿಕೆ ತಯಾರಿಸುವ ಸಾಮರ್ಥ್ಯವನ್ನು ನಾವು ಹೊಂದಿದ್ದೇವೆ" ಎಂದರು.
ಭಾರತದಲ್ಲಿ ಕೇವಲ 29 ಪ್ರತಿಶತದಷ್ಟು ಜನ ಮಾತ್ರ ಕೋವಿಡ್ ಬೂಸ್ಟರ್ ಲಸಿಕೆ ತೆಗೆದುಕೊಂಡಿದ್ದಾರೆ. ಅಪಾಯಗಳನ್ನು ಪರಿಗಣಿಸಿ ಇನ್ನೂ ಹೆಚ್ಚಿನ ಜನ ಬೂಸ್ಟರ್ ಡೋಸ್ ಪಡೆಯಬಹುದು. ಯಾವುದೇ ರೀತಿಯ ಸಾಂಕ್ರಾಮಿಕ ರೋಗವನ್ನು ಉಂಟುಮಾಡುವ ರೋಗಗಳಿಗೆ 100 ದಿನಗಳಲ್ಲಿ ಲಸಿಕೆಯನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಭಾರತ ಹೊಂದಿದೆ ಎಂದು ಹೇಳಿದರು.
ಭಾರತದಲ್ಲಿ ಕಂಡು ಬರುತ್ತಿರುವ ನಿಫಾ ವೈರಸ್ ಪ್ರಕರಣಗಳ ಮಧ್ಯೆ, ಭಾರತವು ಆಸ್ಟ್ರೇಲಿಯಾದಿಂದ ಮತ್ತೆ ನಿಫಾ ವೈರಸ್ನ 20 ಡೋಸ್ ಲಸಿಕೆಗಳನ್ನು ಖರೀದಿಸುತ್ತಿದೆ ಎಂದು ಬಹ್ಲ್ ಹೇಳಿದರು. ಆಸ್ಟ್ರೇಲಿಯಾದ ಕ್ವೀನ್ಸ್ಲ್ಯಾಂಡ್ ವಿಶ್ವವಿದ್ಯಾಲಯವು ಜಾಗತಿಕವಾಗಿ 14 ಜನರ ಮೇಲೆ ಪರೀಕ್ಷಿಸಿದ ಮತ್ತು ಸುರಕ್ಷಿತವೆಂದು ಕಂಡುಕೊಂಡ ಎಂ 102.4 ಆ್ಯಂಟಿಬಾಡಿಯ ಕಾರಣದಿಂದ ಯಾರೂ ಸಾವನ್ನಪ್ಪಿಲ್ಲ ಎಂದು ಬಹ್ಲ್ ಮಾಹಿತಿ ನೀಡಿದರು.
ಇದರ ಅಡ್ಡಪರಿಣಾಮಗಳ ಬಗ್ಗೆ ಯಾವುದೇ ಜ್ಞಾನವಿಲ್ಲದ ಕಾರಣ ಇದನ್ನು ಅಗತ್ಯತೆಯ ಆಧಾರದ ಮೇಲೆ ನೀಡಲಾಗುವುದು. ಇದನ್ನು ಕೇರಳ ಸರ್ಕಾರ ಮತ್ತು ಅಲ್ಲಿನ ವೈದ್ಯರು ನಿರ್ಧರಿಸಲಿದ್ದಾರೆ. ಪ್ರಸ್ತುತ ಭಾರತವು 10 ಡೋಸ್ಗಳನ್ನು ಹೊಂದಿದೆ, ನಾವು ಇನ್ನೂ 10 ಡೋಸ್ ನೀಡುವಂತೆ ವಿನಂತಿಸಿದ್ದೇವೆ. ಪ್ರತಿ ವ್ಯಕ್ತಿಗೆ ಎರಡು ಡೋಸ್ಗಳ ಅಗತ್ಯವಿದೆ ಮತ್ತು ಇಲ್ಲಿಯವರೆಗೆ ಇದನ್ನು ಭಾರತದಲ್ಲಿ ಯಾರಿಗೂ ನೀಡಲಾಗಿಲ್ಲ ಎಂದು ಅವರು ಹೇಳಿದರು.
ಈ ಲಸಿಕೆಯನ್ನು ಕ್ವೀನ್ಸ್ಲ್ಯಾಂಡ್ ಸಂಶೋಧಕರು ಮೂರು ಬ್ಯಾಚ್ಗಳಲ್ಲಿ ಅಭಿವೃದ್ಧಿಪಡಿಸಿದ್ದಾರೆ ಮತ್ತು ಮೈನಸ್ 80 ತಾಪಮಾನದಲ್ಲಿ ಸಂಗ್ರಹಿಸಿ ಇಡಲಾಗಿದೆ. ಇದನ್ನು ಹಾಗೆ ಐದು ವರ್ಷಗಳವರೆಗೆ ಸಂಗ್ರಹಿಸಿ ಇಡಬಹುದು. ಮೊದಲ ಬಾರಿಗೆ 2018 ರಲ್ಲಿ ಭಾರತ ನಿಫಾ ಲಸಿಕೆಯನ್ನು ತರಿಸಿಕೊಂಡಿತ್ತು. ಆದರೆ ಆ ವೇಳೆಗೆ ನಿಫಾ ವೈರಸ್ ಪ್ರಕರಣಗಳು ಕಡಿಮೆಯಾಗಿದ್ದರಿಂದ ಅದನ್ನು ಬಳಸಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ : ಮುಂಬೈ ಷೇರು ಮಾರುಕಟ್ಟೆ ಹೊಸ ದಾಖಲೆ! 67,839ರಲ್ಲಿ ಸೆನ್ಸೆಕ್ಸ್; 20,192ರಲ್ಲಿ ಕೊನೆಗೊಂಡ ನಿಫ್ಟಿ