ನವದೆಹಲಿ: ಜಗತ್ತಿನ್ನೆಲೆಡೆ ತನ್ನ ಕಬಂಧ ಬಾಹು ವಿಸ್ತರಿಸುವ ಆ್ಯಪಲ್ ಕಂಪನಿ ತನ್ನ ಹೊಸ ಹೊಸ ವೈಶಿಷ್ಟ್ಯದಿಂದ ಮಾರುಕಟ್ಟೆಗಳಲ್ಲೇ ಟಾಪ್ ಪಟ್ಟಿಯಲ್ಲಿದೆ. ಆ್ಯಪಲ್ ಕಂಪನಿಗೆ ಲಾಭದಾಯಕ ಮಾರುಕಟ್ಟೆಗಳಲ್ಲಿ ಭಾರತವು ಒಂದು. ಭಾರತವು ಜಾಗತಿಕ ಮಟ್ಟದಲ್ಲಿ ಆ್ಯಪಲ್‌ನ ಟಾಪ್ 5 ಮಾರುಕಟ್ಟೆಗಳಲ್ಲಿ ಒಂದಾಗಿದೆ. 2023 ರ 2 ನೇ ತ್ರೈಮಾಸಿಕದಲ್ಲಿ ಶೇಕಡಾ 59 ರಷ್ಟು ಪಾಲು ಹೊಂದಿರುವ ಅಲ್ಟ್ರಾ-ಪ್ರೀಮಿಯಂ ವಿಭಾಗದಲ್ಲಿ ಐಫೋನ್ ತಯಾರಕ ಕಂಪನಿ ತನ್ನ ಮುನ್ನಡೆ ಕಾಯ್ದುಕೊಂಡಿದೆ.
ಭಾರತದ ಪ್ರೀಮಿಯಂ ಸ್ಮಾರ್ಟ್‌ಫೋನ್ ವಿಭಾಗವು ಏಪ್ರಿಲ್-ಜೂನ್ ಅವಧಿಯಲ್ಲಿ ಶೇಕಡ 112 ರಷ್ಟು ಬೆಳವಣಿಗೆ ದಾಖಲಿಸಿದೆ. ಇದು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಕೌಂಟರ್ ಪಾಯಿಂಟ್ ರಿಸರ್ಚ್ ಪ್ರಕಾರ ಭಾರತದಲ್ಲಿ ಆ್ಯಪಲ್ ಐಫೋನ್ ಮಾರಾಟ ಶೇಕಡಾ 17 ರಷ್ಟು ಆಗಿದ್ದು, ಭಾರತವು ಐಫೋನ್ ಮಾರಾಟದಲ್ಲಿ ಜರ್ಮನಿ ಮತ್ತು ಫ್ರಾನ್ಸ್ ಅನ್ನು ಮೀರಿಸಿದೆ. ಐಫೋನ್ ಮಾರಾಟದಲ್ಲಿ ಭಾರತವು ಈಗ U.K., ಜಪಾನ್, ಚೀನಾ ಮತ್ತು ಅಮೆರಿಕದ ನಂತರದ ಸ್ಥಾನದಲ್ಲಿದೆ.
''ಆ್ಯಪಲ್ 59 ಶೇಕಡಾ ಪಾಲನ್ನು ಹೊಂದಿರುವ ಅಲ್ಟ್ರಾ - ಪ್ರೀಮಿಯಂ ವಿಭಾಗದಲ್ಲಿ ಮುನ್ನಡೆ ಸಾಧಿಸಿದೆ. ಭಾರತವು ಈಗ ಆ್ಯಪಲ್ ಅಗ್ರ - ಐದು ಮಾರುಕಟ್ಟೆಗಳಲ್ಲಿ ಒಂದಾಗಿದೆ " ಎಂದು ಸಂಶೋಧನಾ ವಿಶ್ಲೇಷಕ ಶುಭಂ ಸಿಂಗ್ ಹೇಳಿದ್ದಾರೆ. Vivo ತನ್ನ ಎರಡನೇ ಸ್ಥಾನವನ್ನು ಕಾಯ್ದುಕೊಂಡಿದೆ ಮತ್ತು ವಾರ್ಷಿಕ ಬೆಳವಣಿಗೆ ಕಂಡುಕೊಳ್ಳುವಲ್ಲಿ ಅಗ್ರ ಐದರಲ್ಲಿರುವ ಏಕೈಕ ಬ್ರ್ಯಾಂಡ್ ಆಗಿದೆ. ಇನ್ನು OnePlus ಎರಡನೇ ತ್ರೈಮಾಸಿಕದಲ್ಲಿ ಶೇ 68ರಷ್ಟು ಬೆಳವಣಿಗೆಯೊಂದಿಗೆ ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ಬ್ರ್ಯಾಂಡ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.