ನವದೆಹಲಿ: ಈಗ ಭಾರತದಲ್ಲೇ ತನ್ನ ಸ್ಮಾರ್ಟ್ಫೋನ್ಗಳನ್ನು ತಯಾರಿಸುತ್ತಿರುವ ಆ್ಯಪಲ್ ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಶೇ 7ರಷ್ಟು ಪಾಲು ಪಡೆಯುವತ್ತ ಮುನ್ನಡೆದಿದೆ. ಆ್ಯಂಡ್ರಾಯ್ಡ್ ಫೋನ್ ಪ್ರಾಬಲ್ಯದ ಭಾರತದಲ್ಲಿ ಆ್ಯಪಲ್ ಐಫೋನ್ಗಳು ನಿಧಾನವಾಗಿ ಪಾಲು ಹೆಚ್ಚಿಸಿಕೊಳ್ಳುತ್ತಿವೆ ಎಂದು ಇತ್ತೀಚಿನ ಅಂಕಿ ಅಂಶಗಳು ತೋರಿಸಿವೆ. ಈ ವರ್ಷದ ಮೊದಲಾರ್ಧದಲ್ಲಿ ಭಾರತದಿಂದ ರಫ್ತು ಮಾಡಲಾದ ಆ್ಯಪಲ್ ಐಫೋನ್ಗಳ ಪ್ರಮಾಣ ಶೇಕಡಾ 68 ರಷ್ಟು (ವರ್ಷದಿಂದ ವರ್ಷಕ್ಕೆ) ಹೆಚ್ಚಾಗಿದೆ.
ವರ್ಷದ ಮೊದಲಾರ್ಧದಲ್ಲಿ ಆ್ಯಪಲ್ ಭಾರತೀಯ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಶೇಕಡಾ 6 ರಷ್ಟು ಮಾರುಕಟ್ಟೆ ಪಾಲನ್ನು ಪಡೆದುಕೊಂಡಿದೆ ಮತ್ತು ಸೂಪರ್-ಪ್ರೀಮಿಯಂ ಸ್ಮಾರ್ಟ್ಫೋನ್ ವಿಭಾಗದಲ್ಲಿ (50,000-100,000 ರೂ.ಗಳ ನಡುವೆ ಬೆಲೆ) ಪ್ರಾಬಲ್ಯ ಸಾಧಿಸಿದೆ ಎಂದು ಮಾರುಕಟ್ಟೆ ವಿಶ್ಲೇಷಕ ಸಂಸ್ಥೆ ಸೈಬರ್ ಮೀಡಿಯಾ ರಿಸರ್ಚ್ (ಸಿಎಂಆರ್) ಅಂಕಿ ಅಂಶಗಳು ತಿಳಿಸಿವೆ.
ಹೆಚ್ಚಿದ 'ಮೇಕ್ ಇನ್ ಇಂಡಿಯಾ' ಉಪಕ್ರಮಗಳಿಂದಾಗಿ ಪ್ರಸಕ್ತ ತ್ರೈಮಾಸಿಕದಲ್ಲಿ ಐಫೋನ್ 15 ರಫ್ತು ಶೇಕಡಾ 65 ರಷ್ಟಿದೆ ಎಂದು ಸಿಎಂಆರ್ ಅಂದಾಜಿಸಿದೆ. ಕಳೆದ ನಾಲ್ಕು ವರ್ಷಗಳಲ್ಲಿ ದೇಶದಲ್ಲಿ ದೇಶೀಯ ಐಫೋನ್ ಉತ್ಪಾದನೆ ಗಮನಾರ್ಹವಾಗಿ ಹೆಚ್ಚಾಗಿದೆ. ಆ್ಯಪಲ್ ಐಫೋನ್ ತಯಾರಕ ಫಾಕ್ಸ್ಕಾನ್, ತಮಿಳುನಾಡು ಬಳಿಯ ಶ್ರೀಪೆರಂಬದೂರ್ ಕಾರ್ಖಾನೆಯಲ್ಲಿ ಮುಂದಿನ ತಲೆಮಾರಿನ ಐಫೋನ್ 15 ಗಳನ್ನು ಸ್ಥಳೀಯವಾಗಿ ತಯಾರಿಸುತ್ತಿದೆ. ಅಲ್ಲದೆ ಫೋನ್ ಉತ್ಪಾದನೆಯ ವೇಗವನ್ನು ಗಮನಾರ್ಹವಾಗಿ ಹೆಚ್ಚಿಸಿದೆ.