ನವದೆಹಲಿ: ಮೊಬೈಲ್ ಅಪ್ಲಿಕೇಶನ್ಗಳಲ್ಲಿ ಬಳಕೆದಾರರು ಮಾಡುವ ಖರ್ಚು 2023 ರಲ್ಲಿ ಹೊಸ ಗರಿಷ್ಠ 171 ಬಿಲಿಯನ್ ಡಾಲರ್ಗೆ ತಲುಪಿದ್ದು, ವರ್ಷದಿಂದ ವರ್ಷಕ್ಕೆ ಶೇಕಡಾ 3 ರಷ್ಟು ಬೆಳವಣಿಗೆಯಾಗಿದೆ. 2022 ರಲ್ಲಿ ಈ ವೆಚ್ಚ ಶೇಕಡಾ 2 ರಷ್ಟು ಕುಸಿತವಾಗಿತ್ತು. ಮೊಬೈಲ್ ಅಪ್ಲಿಕೇಶನ್ ಆರ್ಥಿಕತೆಯು ಈಗ ಅರ್ಧ ಟ್ರಿಲಿಯನ್ ಡಾಲರ್ ಮಾರುಕಟ್ಟೆಯಾಗಿದೆ. 2023 ರಲ್ಲಿ ಆ್ಯಪ್ ಸ್ಟೋರ್ ಮತ್ತು ಮೊಬೈಲ್ ಜಾಹೀರಾತು ವೆಚ್ಚಕ್ಕಾಗಿ ಪ್ರತಿದಿನ ಸುಮಾರು 1.5 ಬಿಲಿಯನ್ ಡಾಲರ್ ಖರ್ಚು ಮಾಡಲಾಗಿದೆ.
ಇದರಲ್ಲಿ 362 ಬಿಲಿಯನ್ ಡಾಲರ್ ಮೊಬೈಲ್ ಜಾಹೀರಾತು ವೆಚ್ಚ ಕೂಡ ಸೇರಿದೆ. ಇದು ಈ ವರ್ಷ ಶೇಕಡಾ 8 ರಷ್ಟು ಹೆಚ್ಚಳವಾಗಿದೆ ಎಂದು ಡೇಟಾ ಡಾಟ್ ಎಐನ 'ಸ್ಟೇಟ್ ಆಫ್ ಮೊಬೈಲ್ 2024' ವರದಿ ತಿಳಿಸಿದೆ. 2023 ರಲ್ಲಿ ಆ್ಯಪ್ಗಳ ಉತ್ತಮ ಕಾರ್ಯನಿರ್ವಹಣೆಗೆ ಆದಾಯವೊಂದೇ ಮಾನದಂಡವಲ್ಲ. ಡೌನ್ಲೋಡ್ಗಳು ಕೂಡ ಅಗಾಧ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಆ್ಯಪ್ಗಳಲ್ಲಿ ಕಳೆದ ಸಮಯ ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದೆ.
ಆ್ಯಪ್ನಲ್ಲಿ ಕಳೆಯುವ ಸಮಯ 5.1 ಟ್ರಿಲಿಯನ್ (ಶೇಕಡಾ 6 ಕ್ಕಿಂತ ಹೆಚ್ಚು ಬೆಳವಣಿಗೆ) ಗಂಟೆಗಳಿಗೆ ಏರಿದೆ. ಏತನ್ಮಧ್ಯೆ, ಡೌನ್ಲೋಡ್ಗಳು 257 ಬಿಲಿಯನ್ (ಸುಮಾರು 1 ಪ್ರತಿಶತದಷ್ಟು ಬೆಳವಣಿಗೆ) ನಲ್ಲಿ ಸ್ಥಿರವಾಗಿ ಉಳಿದಿವೆ. "2022 ರಲ್ಲಿನ ಕುಸಿತವನ್ನು ಗಮನಿಸಿದರೆ ಈ ವರ್ಷ ಆ್ಯಪ್ ಸ್ಟೋರ್ ವೆಚ್ಚದ ಹೆಚ್ಚಳವು ವಿಶೇಷವಾಗಿದೆ. ಬಹುತೇಕ ಈ ವೆಚ್ಚವು ಮೊಬೈಲ್ ಗೇಮಿಂಗ್ ವಲಯದಿಂದ ಬಂದಿದೆ." ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.