ಚೆನ್ನೈ :ಹಾಲಿನಲ್ಲಿ ಕಲಬೆರಕೆ ಆಗಿದ್ದರೆ ಅದನ್ನು ಕೇವಲ 30 ಸೆಕೆಂಡುಗಳಲ್ಲಿ ಕಂಡು ಹಿಡಿಯುವ ತಂತ್ರಜ್ಞಾನವೊಂದನ್ನು ಮದ್ರಾಸ್ ಐಐಟಿ ಸಂಶೋಧಕರು ಆವಿಷ್ಕಾರ ಮಾಡಿದ್ದಾರೆ. ಹೊಸ ಥ್ರೀ ಡಿ ಪೇಪರ್ ಆಧಾರಿತ ಪೋರ್ಟಬಲ್ ಸಾಧನವನ್ನು ಬಳಸಿ ನೀವು ನಿಮ್ಮ ಮನೆಯಲ್ಲಿಯೇ ಹಾಲಿನ ಕಲಬೆರಕೆ ಪತ್ತೆ ಮಾಡಬಹುದು. ಹಾಲಿನ ಕಲಬೆರಕೆ ಮಾಡಲು ಬಳಸುವ ಯೂರಿಯಾ, ಡಿಟರ್ಜೆಂಟ್‌ಗಳು, ಸಾಬೂನು, ಸ್ಟಾರ್ಚ್, ಹೈಡ್ರೋಜನ್ ಪೆರಾಕ್ಸೈಡ್, ಸೋಡಿಯಂ ಹೈಡ್ರೋಜನ್ ಕಾರ್ಬೊನೇಟ್ ಮತ್ತು ಉಪ್ಪು ಸೇರಿದಂತೆ ಇನ್ನು ಹಲವಾರು ವಸ್ತುಗಳನ್ನು ಈ ಸಾಧನ ಪತ್ತೆ ಮಾಡಬಲ್ಲದು.
ಪ್ರಯೋಗಾಲಯದಲ್ಲಿ ಹಾಲಿನ ಗುಣಮಟ್ಟ ಪರೀಕ್ಷಿಸುವ ಸಾಂಪ್ರದಾಯಿಕ ವಿಧಾನ ದುಬಾರಿ ಹಾಗೂ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಆದರೆ ಹೊಸ ತಂತ್ರಜ್ಞಾನ ತುಂಬಾ ಅಗ್ಗ ದರದಾಗಿದ್ದು, ಕಡಿಮೆ ಸಮಯದಲ್ಲಿ ಫಲಿತಾಂಶಗಳನ್ನು ನೀಡುತ್ತದೆ. ಹೊಸ ಸಾಧನವು ನೀರು, ಜ್ಯೂಸ್, ಮಿಲ್ಕ್ ಶೇಕ್ಗಳಲ್ಲಿನ ಕಲಬೆರಕೆಯನ್ನು ಸಹ ಪತ್ತೆ ಮಾಡಬಲ್ಲದು. ಕಲಬೆರಕೆಗಳನ್ನು ಪರೀಕ್ಷಿಸಲು ಯಾವುದೇ ದ್ರವದ ಒಂದು ಮಿಲಿಲೀಟರ್ ಸ್ಯಾಂಪಲ್ ಸಾಕು ಎಂದು ಸಂಶೋಧಕರು ಹೇಳಿದ್ದಾರೆ.
3D ಪೇಪರ್ ಆಧಾರಿತ ಮೈಕ್ರೋಫ್ಲೂಯಿಡಿಕ್ ಸಾಧನವು ಮೇಲ್ಭಾಗ ಮತ್ತು ಕೆಳಭಾಗದ ಕವರ್ ಮತ್ತು ಸ್ಯಾಂಡ್‌ವಿಚ್ ರಚನೆಯ ಮಧ್ಯದ ಪದರದಿಂದ ಮಾಡಲ್ಪಟ್ಟಿದೆ. ಈ 3D ವಿನ್ಯಾಸವು ಸ್ಥಿರವಾದ ವೇಗದಲ್ಲಿ ದಟ್ಟವಾದ ದ್ರವಗಳನ್ನು ಸಾಗಿಸಲು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಐಐಟಿ ಮದ್ರಾಸ್ನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಡಾ. ಪಲ್ಲಬ್ ಸಿನ್ಹಾ ಮಹಾಪಾತ್ರ ಹೇಳಿದರು.
ಕಾಗದವನ್ನು ರಿ-ಎಜೆಂಟ್ಗಳೊಂದಿಗೆ (ಕಾರಕಗಳು) ಸಂಸ್ಕರಿಸಲಾಗುತ್ತದೆ ಮತ್ತು ಒಣಗಲು ಬಿಡಲಾಗುತ್ತದೆ. ಒಣಗಿದ ನಂತರ ಎರಡೂ ಕಾಗದದ ಪದರಗಳು ಸಪೋರ್ಟ್ನ ಎರಡೂ ಬದಿಗಳಿಗೆ ಅಂಟಿಕೊಂಡಿರುತ್ತವೆ ಮತ್ತು ಕವರ್ಗಳು ಡಬಲ್-ಸೈಡೆಡ್ ಟೇಪ್ನೊಂದಿಗೆ ಅಂಟಿಕೊಳ್ಳುತ್ತವೆ. ಈ ವಿನ್ಯಾಸದಲ್ಲಿ ವಾಟ್ಮ್ಯಾನ್ ಫಿಲ್ಟರ್ ಪೇಪರ್ ಗ್ರೇಡ್ 4 ಅನ್ನು ಬಳಸಲಾಗಿದೆ. ಇದು ದ್ರವದ ಹರಿವಿಗೆ ಸಹಾಯ ಮಾಡುತ್ತದೆ ಮತ್ತು ಹೆಚ್ಚಿನ ಕಾರಕಗಳ ಶೇಖರಣೆಗೆ ಅನುವು ಮಾಡಿಕೊಡುತ್ತದೆ. ಎಲ್ಲಾ ಕಾರಕಗಳನ್ನು ಅವುಗಳ ಕರಗುವಿಕೆಗೆ ಅನುಗುಣವಾಗಿ ಬಟ್ಟಿ ಇಳಿಸಿದ ನೀರಿನಲ್ಲಿ ಅಥವಾ ಎಥೆನಾಲ್‌ನಲ್ಲಿ ಕರಗಿಸಲಾಗುತ್ತದೆ. ಬಣ್ಣಮಾಪಕ ಪತ್ತೆ ತಂತ್ರಗಳನ್ನು ಬಳಸಿ ಎಲ್ಲಾ ಕಲಬೆರಕೆಗಳನ್ನು ವಿವಿಧ ದ್ರವ ಮಾದರಿಗಳಲ್ಲಿ ಪತ್ತೆ ಮಾಡಲಾಗುತ್ತದೆ ಎಂದು ಮಹಾಪಾತ್ರ ಹೇಳಿದರು.
ಹಾಲಿನ ಕಲಬೆರಕೆಯು ವ್ಯಾಪಕವಾಗಿ ಹರಡಿರುವ ಪಿಡುಗಾಗಿದೆ. ವಿಶೇಷವಾಗಿ ಭಾರತ, ಪಾಕಿಸ್ತಾನ, ಚೀನಾ ಮತ್ತು ಬ್ರೆಜಿಲ್‌ನಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಇದು ಅತ್ಯಧಿಕವಾಗಿದೆ. ಕಲಬೆರಕೆ ಹಾಲಿನ ಸೇವನೆಯಿಂದ ಮೂತ್ರಪಿಂಡದ ತೊಂದರೆಗಳು, ಶಿಶು ಮರಣ, ಜಠರ ಕರುಳಿನ ತೊಂದರೆಗಳು, ಅತಿಸಾರ ಮತ್ತು ಕ್ಯಾನ್ಸರ್‌ನಂಥ ಅನಾರೋಗ್ಯಗಳು ಎದುರಾಗಬಹುದು.
ಕಲಬೆರಕೆ ವಿರುದ್ಧ ಅಜಿತ್ ಪವಾರ್ ಆಕ್ರೋಶ:ಹಾಲಿನಲ್ಲಿ ಕಲಬೆರಕೆ ಮಾಡುವ ಮೂಲಕ ಸಾಮಾನ್ಯ ಜನರ ಜೀವನದ ಜತೆ ಚೆಲ್ಲಾಟವಾಡುವವರನ್ನು ಗಲ್ಲಿಗೇರಿಸಬೇಕೆಂದು ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಅಜಿತ್ ಪವಾರ್ ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಹಾಲಿನ ಕಲಬೆರಕೆ ಸಮಸ್ಯೆ ಗಂಭೀರವಾಗಿದೆ. ಹಾಲಿನ ಕಲಬೆರಕೆಯ ದೊಡ್ಡ ನಂಟು ಮಹಾರಾಷ್ಟ್ರದಾದ್ಯಂತ ಹರಡಿದೆ. ಸಮಸ್ಯೆ ಗಂಭೀರವಾಗಿದ್ದು, ಚಿಕ್ಕ ಮಕ್ಕಳ ಜೀವನದೊಂದಿಗೆ ಚೆಲ್ಲಾಟವಾಡಲಾಗುತ್ತಿದೆ ಎಂದರು.
ಇದನ್ನೂ ಓದಿ :ಎಷ್ಟೇ ಕುದಿಸಿದರೂ ಹಾಲು ಹೊರಚೆಲ್ಲದ ವಿಶಿಷ್ಟ ಪಾತ್ರೆ ಕಂಡು ಹಿಡಿದ ವಿದ್ಯಾರ್ಥಿನಿ.. ಅಮೆರಿಕದಲ್ಲೂ ಪ್ರದರ್ಶನಕ್ಕೆ ಸಿದ್ಧತೆ