ನವದೆಹಲಿ : ತಂತ್ರಜ್ಞಾನ ದೈತ್ಯ ಐಬಿಎಂ, ಟೋಕಿಯೊ ವಿಶ್ವವಿದ್ಯಾಲಯ ಮತ್ತು ಚಿಕಾಗೋ ವಿಶ್ವವಿದ್ಯಾಲಯಗಳ ಸಹಭಾಗಿತ್ವದಲ್ಲಿ 2033ರ ವೇಳೆಗೆ 100 ಮಿಲಿಯನ್ ಡಾಲರ್ ವೆಚ್ಚದಲ್ಲಿ 1,00,000 ಕ್ಯೂಬಿಟ್ಸ್ ಸಾಮರ್ಥ್ಯದ ಕ್ವಾಂಟಮ್ ಕೇಂದ್ರಿತ ಸೂಪರ್ ಕಂಪ್ಯೂಟರ್ ಅನ್ನು ತಯಾರಿಸುವುದಾಗಿ ಭಾನುವಾರ ಘೋಷಿಸಿದೆ. ಕಂಪನಿಯ ಪ್ರಕಾರ 1,00,000 ಕ್ಯೂಬಿಟ್ ವ್ಯವಸ್ಥೆಯು ಪ್ರಪಂಚದ ಕೆಲ ಅತ್ಯಂತ ದೀರ್ಘಾವಧಿಯ ಪ್ರಶ್ನೆಗಳನ್ನು ಬಿಡಿಸಲು ಅಡಿಪಾಯವಾಗಿ ಕಾರ್ಯನಿರ್ವಹಿಸಲಿದೆ. ಇಂದಿನ ಅತ್ಯಂತ ಮುಂದುವರಿದ ಸೂಪರ್‌ಕಂಪ್ಯೂಟರ್‌ಗಳು ಸಹ ಎಂದಿಗೂ ಪರಿಹರಿಸಲು ಸಾಧ್ಯವಾಗದ ಕ್ಲಿಷ್ಟಕರ ಸಮಸ್ಯೆಗಳನ್ನು ಕೂಡ ಇದು ಬಿಡಿಸಲಿದೆ.
"ಜಾಗತಿಕವಾಗಿ ಉಪಯುಕ್ತ ಕ್ವಾಂಟಮ್ ತಂತ್ರಜ್ಞಾನವನ್ನು ತಯಾರಿಸುವ ನಮ್ಮ ಮಾರ್ಗಸೂಚಿ ಮತ್ತು ಧ್ಯೇಯದೊಂದಿಗೆ ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದೇವೆ. ನಮ್ಮ ಪಾಲುದಾರರೊಂದಿಗೆ, ಕ್ವಾಂಟಮ್ ಆಧರಿತ ಹೊಸ ವರ್ಗದ ಸೂಪರ್ ಕಂಪ್ಯೂಟಿಂಗ್ ಅನ್ನು ನಿಜವಾಗಿಯೂ ಅನ್ವೇಷಿಸಲು ಮತ್ತು ಅಭಿವೃದ್ಧಿಪಡಿಸಲು ಪ್ರಾರಂಭಿಸಬಹುದು" ಎಂದು ಐಬಿಎಂ ಅಧ್ಯಕ್ಷ ಮತ್ತು ಸಿಇಓ ಅರವಿಂದ ಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 2023 ರ ಅಂತ್ಯದ ವೇಳೆಗೆ ಕ್ವಾಂಟಮ್ ಕೇಂದ್ರಿತ ಸೂಪರ್‌ಕಂಪ್ಯೂಟರ್‌ಗಳಿಗಾಗಿ ಅದರ ಅಗತ್ಯ ವಾಸ್ತುಶಿಲ್ಪದ ಮೂರು ಮೂಲಾಧಾರಗಳನ್ನು ಪ್ರಾರಂಭಿಸಲು ಐಬಿಎಂ ಉದ್ದೇಶಿಸಿದೆ.
ಮೊದಲನೆಯದು- ಹೊಸ 133- ಕ್ಯೂಬಿಟ್ 'IBM ಹೆರಾನ್' ಪ್ರೊಸೆಸರ್. IBM ನ ಹಿಂದಿನ ತಲೆಮಾರಿನ ಕ್ವಾಂಟಮ್ ಪ್ರೊಸೆಸರ್‌ಗಳ ಸಂಪೂರ್ಣ ಮರುವಿನ್ಯಾಸ, ಹೆಚ್ಚಿನ ಕಾರ್ಯಕ್ಷಮತೆಯನ್ನು ಅನುಮತಿಸಲು ಹೊಸ ಎರಡು-ಕ್ಯೂಬಿಟ್ ಗೇಟ್. ಎರಡನೆಯದು- IBM ಕ್ವಾಂಟಮ್ ಸಿಸ್ಟಮ್ ಟು ಆಗಿದೆ. ಇದು ಕ್ಲಾಸಿಕಲ್ ಕಂಟ್ರೋಲ್ ಎಲೆಕ್ಟ್ರಾನಿಕ್ಸ್ ಮತ್ತು ಹೈ-ಡೆನ್ಸಿಟಿ ಕ್ರಯೋಜೆನಿಕ್ ವೈರಿಂಗ್ ಮೂಲಸೌಕರ್ಯ ಸೇರಿದಂತೆ ಅದರ ಆಧಾರವಾಗಿರುವ ಘಟಕಗಳಲ್ಲಿ ಸ್ಕೇಲಿಂಗ್ ಅಂಶಗಳನ್ನು ಪರಿಚಯಿಸಲು ಮಾಡ್ಯುಲರ್ ಮತ್ತು ಫ್ಲೆಕ್ಸಿಬಲ್ ಆಗಿ ವಿನ್ಯಾಸಗೊಳಿಸಲಾದ ಹೊಸ ಪ್ರಮುಖ ವ್ಯವಸ್ಥೆಯಾಗಿದೆ. ಈ ವ್ಯವಸ್ಥೆಯು 2023 ರ ಅಂತ್ಯದ ವೇಳೆಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ ಎಂದು ಕಂಪನಿ ತಿಳಿಸಿದೆ.