ಭಾರತವು ವೈವಿಧ್ಯಮಯ ಮಣ್ಣು ಮತ್ತು ಹವಾಮಾನ ಪರಿಸ್ಥಿತಿಗಳನ್ನು ಹೊಂದಿದ್ದು, ಇದು ಹಣ್ಣು, ತರಕಾರಿ, ಹೂವು ಮತ್ತು ಮಸಾಲೆಗಳು ಮತ್ತು ಸಂಬಾರ ಪದಾರ್ಥಗಳಂತಹ ವಿವಿಧ ತೋಟಗಾರಿಕೆ ಬೆಳೆಗಳ ಕೃಷಿಗೆ ಅಪಾರ ಅವಕಾಶ ನೀಡುತ್ತದೆ. ಒಣ ಹೂವುಗಳಿಗೆ ಭಾರತೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸಾಕಷ್ಟು ಬೇಡಿಕೆಯಿದೆ. ಒಣ ಹೂಗಳು ದೀರ್ಘಕಾಲ ಬಾಳಿಕೆ ಬರುವುದರಿಂದ, ನಿರ್ವಹಿಸಲು ಸುಲಭವಾಗಿರುವುದರಿಂದ ಮತ್ತು ತಾಜಾ ಹೂವುಗಳಿಗೆ ಹೋಲಿಸಿದರೆ ಅಗ್ಗವಾಗಿರುವುದರಿಂದ ಇವುಗಳಿಗೆ ಬೇಡಿಕೆ ಜಾಸ್ತಿ ಇದೆ. ಒಣ ಹೂಗಳನ್ನು ಭಾರತದಿಂದ ಅಮೆರಿಕ, ಜಪಾನ್ ಮತ್ತು ಯುರೋಪಿನಂಥ ದೇಶಗಳಿಗೆ ರಫ್ತು ಮಾಡಲಾಗುತ್ತದೆ.
ವೈವಿಧ್ಯಮಯ ಸಸ್ಯಗಳ ಲಭ್ಯತೆಯಿಂದಾಗಿ ಭಾರತವು ಒಣ ಹೂವುಗಳ ರಫ್ತಿನಲ್ಲಿ ಮೊದಲ ಸ್ಥಾನದಲ್ಲಿದೆ ಮತ್ತು 20 ದೇಶಗಳಿಗೆ 500 ಬಗೆಯ ಹೂವುಗಳನ್ನು ರಫ್ತು ಮಾಡುವ ಮೂಲಕ ವರ್ಷಕ್ಕೆ ಸುಮಾರು 100 ಕೋಟಿ ರೂ. ವಹಿವಾಟು ನಡೆಸುತ್ತಿದೆ. ಭಾರತದಲ್ಲಿ ಅನೇಕ ಪೂಜಾ ಕೇಂದ್ರಗಳು ನಿತ್ಯ 20 ಟನ್ ಹೂವಿನ ತ್ಯಾಜ್ಯ ಉತ್ಪಾದಿಸುತ್ತವೆ. ಭಾರತದಲ್ಲಿ, ಗ್ಲೋಬೊಸಾ, ಹೆಲಿಕ್ರಿಸಮ್, ಅಕ್ರೋಲಿನಮ್, ಸೆಲೋಸಿಯಾ, ಕಾಕ್ಸ್ ಕೋಂಬ್, ಹತ್ತಿ, ಜಿಪ್ಸೊಫಿಲಾ, ಸ್ಟ್ಯಾಟಿಸ್, ಲ್ಯಾವೆಂಡರ್, ಲಾರ್ಕ್ಸ್ಪರ್ ಮತ್ತು ಗುಲಾಬಿಗಳಂತಹ ಹೂವುಗಳು ಒಣಗಿಸಲು ಉತ್ತಮವಾಗಿವೆ. ಹೂವಿನ ವಿಧ ಮತ್ತು ಪ್ರದೇಶದ ವಾತಾವರಣ ಅವಲಂಬಿಸಿ ಒಣ ಹೂವುಗಳು 2 ರಿಂದ 4 ವರ್ಷಗಳವರೆಗೆ ಬಾಳಿಕೆ ಬರುತ್ತವೆ. ಹೂಗಳನ್ನು ಗಾಳಿಯಲ್ಲಿ ಒಣಗಿಸುವುದು, ಓವನ್ನ ಬಿಸಿ ಗಾಳಿಯ ಮೂಲಕ ಒಣಗಿಸುವುದು, ಮೈಕ್ರೋವೇವ್ ಓವನ್ ವಿಧಾನದಲ್ಲಿ ಒಣಗಿಸುವುದು, ಗ್ಲಿಸರಿನ್ ವಿಧಾನ ಮತ್ತು ಫ್ರೀಜ್ ಡ್ರೈಯಿಂಗ್ ವಿಧಾನಗಳಿಂದ ಒಣಗಿಸಬಹುದು.
ಭಾರತದಲ್ಲಿ ಹೂವಿನ ತ್ಯಾಜ್ಯವನ್ನು ಎಸೆಯುವುದರಿಂದ ಅನೇಕ ನದಿಗಳು ಮತ್ತು ಸರೋವರಗಳು ಕಲುಷಿತಗೊಳ್ಳುತ್ತಿವೆ. ಇದು ನೀರಿನ ಹರಿವಿಗೆ ತಡೆ ಒಡ್ಡುವುದಲ್ಲದೇ ರಾಸಾಯನಿಕಗಳನ್ನು ನೀರಿಗೆ ಬಿಡುಗಡೆ ಮಾಡುತ್ತದೆ. ಅಲ್ಲದೇ ಇದು ಜೀವಂತ ಸಸ್ಯ ಮತ್ತು ಪ್ರಾಣಿಗಳ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ. ಭಾರತದಲ್ಲಿ ಹೂವಿನ ತ್ಯಾಜ್ಯವು ಭೂಮಿ ಮತ್ತು ನೀರಿನ ಮೇಲಿನ ಅತಿದೊಡ್ಡ ಮಾಲಿನ್ಯಕಾರಕಗಳಲ್ಲಿ ಒಂದಾಗಿದೆ. ಪೂಜೆಗೆ ಬಳಸಿದ ಹೂಗಳನ್ನು ಪವಿತ್ರ ಎಂದು ಪರಿಗಣಿಸಲಾಗುವುದರಿಂದ ಅವನ್ನು ಕಸದ ಜೊತೆಗೆ ವಿಲೇವಾರಿ ಮಾಡುವುದಿಲ್ಲ. ಭಾರತೀಯರು ಪೂಜೆಗೆ ಬಳಸಿದ ಹೂಗಳನ್ನು ಸಾಮಾನ್ಯವಾಗಿ ನೀರಿನಲ್ಲಿ ವಿಲೇವಾರಿ ಮಾಡುತ್ತಾರೆ. ಅವುಗಳನ್ನು ಹತ್ತಿರದ ಜಲ ಮೂಲಕ್ಕೆ, ಸಾಮಾನ್ಯವಾಗಿ ನದಿ ಅಥವಾ ಸರೋವರಕ್ಕೆ ಎಸೆಯಲಾಗುತ್ತದೆ.
ಗಂಗಾನದಿಗೆ ಎಂಟು ಮಿಲಿಯನ್ ಮೆಟ್ರಿಕ್ ಟನ್ ಹೂವಿನ ತ್ಯಾಜ್ಯ:ಗಂಗಾ ನದಿಗೆ ಪ್ರತಿವರ್ಷ ದೇವಾಲಯಗಳು ಮತ್ತು ಪ್ರಾರ್ಥನಾ ಮಂದಿರಗಳಿಂದ ಸುಮಾರು ಎಂಟು ಮಿಲಿಯನ್ ಮೆಟ್ರಿಕ್ ಟನ್ ಹೂವಿನ ತ್ಯಾಜ್ಯ ಎಸೆಯಲಾಗುತ್ತಿದೆ ಎಂದು ಯುಎನ್ ಹವಾಮಾನ ಬದಲಾವಣೆ ವರದಿ ಹೇಳಿದೆ. ಹೈದರಾಬಾದ್ ಒಂದರಲ್ಲೇ ಸುಮಾರು 1000 ಮೆಟ್ರಿಕ್ ಟನ್ ಹೂವಿನ ತ್ಯಾಜ್ಯವು ಪೂಜಾ ಸ್ಥಳಗಳಲ್ಲಿ ಉತ್ಪತ್ತಿಯಾಗುತ್ತದೆ. ನದಿಗಳು ಅಥವಾ ನೀರಿನ ಮೂಲ ಇಲ್ಲದ ಪ್ರದೇಶಗಳಲ್ಲಿ ಹೂವಿನ ತ್ಯಾಜ್ಯವನ್ನು ಸುಮ್ಮನೆ ಬೀದಿಗಳಲ್ಲಿ ರಾಶಿಯಾಗಿ ಎಸೆಯಲಾಗುತ್ತದೆ. ಇದು ಹಲವಾರು ರೀತಿಯ ಮಾಲಿನ್ಯಕ್ಕೆ ಕಾರಣವಾಗುತ್ತದೆ.
ಕಳೆದ ಕೆಲ ವರ್ಷಗಳಿಂದ ಭಾರತದ ವಿವಿಧ ಭಾಗಗಳ ಉದ್ಯಮಿಗಳು ಈ ತ್ಯಜಿಸಿದ ಹೂವುಗಳನ್ನು ಸಂಗ್ರಹಿಸಿ ಸ್ವಚ್ಛಗೊಳಿಸುವ ಮೂಲಕ ಅವುಗಳನ್ನು ಸಾವಯವ ಗೊಬ್ಬರ ಮತ್ತು ಹೆಚ್ಚು ಮೌಲ್ಯಯುತವಾದ ಸಾಬೂನುಗಳು, ಮೇಣದ ಬತ್ತಿಗಳು, ಮಡಕೆಗಳು, ಫೋಟೋಫ್ರೇಮ್ಗಳು, ಧೂಪದ್ರವ್ಯ ಕಡ್ಡಿಗಳು, ಗ್ರೀಟಿಂಗ್ ಕಾರ್ಡ್ಗಳು, ಸುಗಂಧ ದ್ರವ್ಯಗಳು, ಕೈಯಿಂದ ತಯಾರಿಸಿದ ಕಾಗದ, ರೋಸ್ ವಾಟರ್, ರೋಸ್ ಆಯಿಲ್ ಮುಂತಾದ ಉಪಯುಕ್ತ ಉತ್ಪನ್ನಗಳಾಗಿ ಪರಿವರ್ತಿಸುವ ಮೂಲಕ ಮಾಲಿನ್ಯ ಕಡಿಮೆ ಮಾಡುವ ಯತ್ನಕ್ಕೆ ಕೈಜೋಡಿಸಿದ್ದಾರೆ.