ಬೆಂಗಳೂರು: ಮೆಟಾ ಇತ್ತೀಚೆಗೆ ಆಕ್ಟಿವಿಟಿ ಆಫ್ ಎಂಬ ಪ್ರೈವಸಿ ಸೆಟಿಂಗ್ ಒಂದನ್ನು ಜಾರಿ ಮಾಡಿದೆ. ಇದರ ಸಹಾಯದಿಂದ ಬಳಕೆದಾರರು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಸೇರಿದಂತೆ ಮೆಟಾದ ಪ್ಲಾಟ್ಫಾರ್ಮ್ಗಳಲ್ಲಿ ತಾವು ಹಂಚಿಕೊಂಡ ಡೇಟಾವನ್ನು ನಿಯಂತ್ರಿಸಬಹುದಾಗಿದೆ.
ಇಲ್ಲಿಯವರೆಗೆ, ಮೆಟಾ ನಿರಂತರವಾಗಿ ಬಳಕೆದಾರರ ವೈಯಕ್ತಿಕ ಡೇಟಾವನ್ನು ಬೇರೆ ಕಾರಣಗಳಿಗಾಗಿ ಬಳಸುತ್ತಿರುವ ಆರೋಪಗಳನ್ನು ಎದುರಿಸುತ್ತಿದೆ. ಉದಾಹರಣೆಗೆ, ಕಂಪನಿಯು ಬಳಕೆದಾರರ ಆನ್ಲೈನ್ ಚಟುವಟಿಕೆಗಳನ್ನು ವಾಡಿಕೆಯಂತೆ ಟ್ರ್ಯಾಕ್ ಮಾಡುತ್ತದೆ ಮತ್ತು ನಂತರ ಆ ಡೇಟಾವನ್ನು ಜಾಹೀರಾತು ಉದ್ದೇಶಗಳಿಗಾಗಿ ಇತರ ಕಂಪನಿಗಳಿಗೆ ಮಾರಾಟ ಮಾಡುತ್ತದೆ. ಉದಾಹರಣೆಗೆ, ನೀವು ಬ್ಯಾಗ್ಗಳಿಗಾಗಿ ಸರ್ಚ್ ಮಾಡಿದರೆ, ಕೆಲವೇ ಕ್ಷಣಗಳ ನಂತರ ವಿವಿಧ ಕಂಪನಿಗಳ ಬ್ಯಾಗ್ಗಳ ಜಾಹೀರಾತುಗಳು ನಿಮಗೆ ಕಾಣಿಸಲಾರಂಭಿಸುತ್ತವೆ.
ಏತನ್ಮಧ್ಯೆ ಪ್ರೈವಸಿಯನ್ನು ಹೆಚ್ಚು ಸುರಕ್ಷಿತವಾಗಿಸಲು ಮತ್ತು ಬಳಕೆದಾರರು ತಮ್ಮ ಆನ್ಲೈನ್ ಚಟುವಟಿಕೆಯ ಮೇಲೆ ನಿಯಂತ್ರಣ ಸಾಧಿಸುವ ಸಲುವಾಗಿ ಮೆಟಾ ಆಕ್ಟಿವಿಟಿ ಆಫ್-ಮೆಟಾ ಟೆಕ್ನಾಲಜೀಸ್ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದು ಮೆಟಾ ಪ್ಲಾಟ್ ಫಾರ್ಮ್ನ ಅಪ್ಲಿಕೇಶನ್ಗಳು ಮತ್ತು ವೆಬ್ ಸೈಟ್ಗಳಲ್ಲಿ ಶೇರ್ ಮಾಡುವ ಡೇಟಾವನ್ನು ನೋಡಲು ಮತ್ತು ನಿಯಂತ್ರಿಸಲು ಬಳಕೆದಾರರಿಗೆ ಅವಕಾಶ ನೀಡುವ ಪ್ರೈವಸಿ ಸೆಟ್ಟಿಂಗ್ ಆಗಿದೆ. ಇದು ವ್ಯವಹಾರಗಳು ಮತ್ತು ಸಂಸ್ಥೆಗಳೊಂದಿಗೆ ಬಳಕೆದಾರರು ನಡೆಸುವ ಸಂವಹನಗಳ ಬಗೆಗಿನ ಮಾಹಿತಿಯನ್ನು ಒಳಗೊಂಡಿರುತ್ತದೆ. ಉದಾಹರಣೆಗೆ ವ್ಯವಹಾರಗಳ ಅಪ್ಲಿಕೇಶನ್ಗಳು ಅಥವಾ ವೆಬ್ ಸೈಟ್ಗಳಿಗೆ ಭೇಟಿ ನೀಡಿರುವುದರ ಮಾಹಿತಿಯನ್ನು ಒಳಗೊಂಡಿರುತ್ತದೆ.
ಈಗ ನೀವು ಭೇಟಿ ನೀಡುವ ಯಾವೆಲ್ಲ ವೆಬ್ಸೈಟ್ಗಳು ಮೆಟಾಗೆ ಡೇಟಾ ಕಳುಹಿಸುತ್ತಿವೆ ಎಂಬುದನ್ನು ನೋಡಬಹುದು, ನಿರ್ದಿಷ್ಟ ವೆಬ್ಸೈಟ್ಗಳು ಆ ರೀತಿ ಮಾಡದಂತೆ ತಡೆಯಬಹುದು ಅಥವಾ ಎಲ್ಲ ಡೇಟಾವನ್ನು ಡಿಲೀಟ್ ಮಾಡಲು ಬಳಕೆದಾರರು ಈ ಸಾಧನವನ್ನು ಬಳಸಬಹುದು.
ಇನ್ಸ್ಟಾಗ್ರಾಮ್ ನಿಮ್ಮ ಇಂಟರ್ನೆಟ್ ಚಟುವಟಿಕೆಯನ್ನು ಟ್ರ್ಯಾಕ್ ಮಾಡದಂತೆ ತಡೆಯಲು ಹೀಗೆ ಮಾಡಿ:
- ಇನ್ಸ್ಟಾಗ್ರಾಮ್ ಅಪ್ಲಿಕೇಶನ್ ತೆರೆಯಿರಿ ಮತ್ತು ಕೆಳಗಿನ ಬಲ ಮೂಲೆಯಲ್ಲಿರುವ ನಿಮ್ಮ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡಿ.
- ಮೇಲಿನ ಬಲ ಮೂಲೆಯಲ್ಲಿರುವ ಮೂರು ಸಮತಲ ರೇಖೆಗಳ ಮೇಲೆ ಟ್ಯಾಪ್ ಮಾಡಿ ಮತ್ತು "Settings and Privacy" ಆಯ್ಕೆ ಮಾಡಿ.
- "Activity" ಮತ್ತು ನಂತರ "Activity Off Meta Technologies" ಮೇಲೆ ಟ್ಯಾಪ್ ಮಾಡಿ.
- ಇತರ ಅಪ್ಲಿಕೇಶನ್ ಗಳು ಮತ್ತು ವೆಬ್ ಸೈಟ್ ಗಳಲ್ಲಿ ನಿಮ್ಮ ಚಟುವಟಿಕೆಯನ್ನು ಇನ್ಸ್ಟಾಗ್ರಾಮ್ ಟ್ರ್ಯಾಕ್ ಮಾಡುವುದನ್ನು ತಡೆಯಲು "Disconnect Future Activity" ಮೇಲೆ ಟಾಗಲ್ ಮಾಡಿ.