ಸ್ಮಾರ್ಟ್ಫೋನ್ಗಳಲ್ಲಿ ಯಾವುದಾದರೂ ಅಪ್ಲಿಕೇಷನ್ ಅಥವಾ ವಿಡಿಯೋವನ್ನು ಡೌನ್ಲೋಡ್ ಮಾಡಬೇಕಾದರೆ, ನಿಮ್ಮ ಮೊಬೈಲ್ನ ಸ್ಟೋರೇಜ್ ತುಂಬಿದೆ. ದಯವಿಟ್ಟು ಅನಾವಶ್ಯಕ ಡೇಟಾವನ್ನು ಅಳಿಸಿ ಎಂಬ ನೋಟಿಫಿಕೇಷನ್ಅನ್ನು ನಿಮಗೆ ಬರುತ್ತದೆ. ಕೆಲವೊಮ್ಮೆ ನಾವು ಅನಗತ್ಯ ಫೈಲ್‌ಗಳನ್ನು ಅಳಿಸಿದರೂ, ನಿಮ್ಮ ಫೋನ್ ಸ್ಟೋರೇಜ್ ತುಂಬಿದೆ ಎಂದು ನೋಟಿಫಿಕೇಷನ್ ಕಾಣಿಸಿಕೊಳ್ಳುತ್ತದೆ. ಅದು ಏಕೆ?, ನಮ್ಮ ಫೋನ್‌ನಿಂದ ಅನಗತ್ಯ ಫೋಟೋಗಳನ್ನು ಮತ್ತು ವಿಡಿಯೋ ಹಾಗೂ ಡೇಟಾವನ್ನು ಶಾಶ್ವತವಾಗಿ ಅಳಿಸುವುದು ಹೇಗೆ? ನಮ್ಮ ಫೈಲ್‌ಗಳನ್ನು ಯಾರಿಗೂ ತಲುಪದಂತೆ ತೆಗೆದುಕೊಳ್ಳಬೇಕಾದ ಕ್ರಮಗಳು ಯಾವುವು? ಎಂಬ ಬಗ್ಗೆ ನೋಡೋಣ..
ಫೈಲ್ ಮ್ಯಾನೇಜರ್ (File Manger): ಸಾಮಾನ್ಯವಾಗಿ ಆಂಡ್ರಾಯ್ಡ್ ಫೋನ್‌ಗಳಲ್ಲಿ ಫೈಲ್‌ಗಳನ್ನು ಅಳಿಸಿದ ನಂತರ, ಅವು ಟ್ರ್ಯಾಶ್ ಅಥವಾ ರಿಸೈಕಲ್ ಬಿನ್ ಅಥವಾ ಡಿಲೀಟೆಡ್ ಫೈಲ್ಸ್ ಎಂಬ ಹೆಸರಿನ ಪೋಲ್ಡರ್ಗೆ ಹೋಗುತ್ತವೆ. ಅಂದರೆ ಆ ಫೈಲ್ಗಳು ಇನ್ನೂ ಫೋನ್ನಲ್ಲೇ ಇವೆ ಎಂದು ಅರ್ಥ. ಅದಕ್ಕಾಗಿಯೇ ತಜ್ಞರು ನಿಮ್ಮ ಫೋನ್‌ನಿಂದ ಫೈಲ್‌ಗಳನ್ನು ಶಾಶ್ವತವಾಗಿ ಅಳಿಸಲು ಫೈಲ್ ಮ್ಯಾನೇಜರ್ ಅಥವಾ ಫೈಲ್ ಎಕ್ಸ್‌ಪ್ಲೋರರ್ ಅನ್ನು ಬಳಸಲು ಸಲಹೆ ನೀಡುತ್ತಾರೆ.
ನಿಮ್ಮ ಫೋನ್‌ನಲ್ಲಿರುವ ಫೈಲ್ ಮ್ಯಾನೇಜರ್‌ಗೆ ಹೋಗಿ ಮತ್ತು ಫೈಲ್‌ಗಳನ್ನು ಆಯ್ಕೆಮಾಡಿದ ನಂತರ ಅಳಿಸಿದರೆ, ನೀವು ಅಳಿಸಿರುವ ಫೈಲ್ಗಳು ಟ್ರ್ಯಾಶ್ ಅಥವಾ ರಿಸೈಕಲ್ ಬಿನ್ ಅಥವಾ ಡಿಲೀಟೆಡ್ ಫೈಲ್ಸ್ ಎಂಬ ಹೆಸರಿನ ಫೋಲ್ಡರ್ನಲ್ಲಿ ಕಾಣಿಸುವುದಿಲ್ಲ. ಒಂದು ವೇಳೆ ನೀವು ನಿಮ್ಮ ಫೈಲ್‌ಗಳನ್ನು ಆಂಡ್ರಾಯ್ಡ್ ಖಾತೆಗೆ ಅಥವಾ ಗೂಗಲ್ ಫೋಟೋಗಳು ಅಥವಾ ಗೂಗಲ್ ಡ್ರೈವ್‌ನಂತಹ ಕ್ಲೌಡ್ ಸ್ಟೋರೇಜ್ಗಳಲ್ಲಿ ಸೇವ್ ಮಾಡಿದ್ದರು. ಅವುಗಳನ್ನು ಪ್ರತ್ಯೇಕವಾಗಿ ಅಳಿಸಬೇಕಾಗುತ್ತದೆ.
ಫೈಲ್ ಶ್ರೆಡ್ಡರ್ (File Shredder):ನಾವು ಹೊಸ ಫೋನ್ ಖರೀದಿಸುವಾಗ ಹಳೆಯ ಫೋನ್ ಅನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತೇವೆ. ಕೆಲವೊಂದು ಆ್ಯಪ್ಗಳ ಮೂಲಕ ಅಥವಾ ಸಾಫ್ಟ್ವೇರ್ಗಳ ಮೂಲಕ ನಮ್ಮಿಂದ ಮೊಬೈಲ್ ಖರೀದಿಸಿದವರು ನಾವು ಡಿಲೀಟ್ ಮಾಡಿರುವ ಫೈಲ್‌ಗಳನ್ನು ರಿಕವರಿ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಅದೇ ಕಾರಣದಿಂದ ನಾವು ಮುಂಜಾಗ್ರತೆ ವಹಿಸಬೇಕಾಗುತ್ತದೆ. ಅದರಿಂದಾಗಿ ಗೂಗಲ್ ಆಂಡ್ರಾಯ್ಡ್ 6ನ ಆಪರೇಟಿಂಗ್ ಸಿಸ್ಟಂನ ಹೊಸ ಆವೃತ್ತಿಗಳಿಗೆ ಎನ್ಕ್ರಿಪ್ಶನ್ ಒದಗಿಸಲಾಗುತ್ತಿದೆ. ಈ ಎನ್ಕ್ರಿಪ್ಶನ್ ಇದ್ದಾಗ ಡಿಲೀಟ್ ಮಾಡಿದ ಫೈಲ್‌ಗಳನ್ನು ಮತ್ತೆ ಪಡೆಯಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಕೆಲವೊಂದು ಫೈಲ್ಗಳು ಬೇರೊಂದು ಹೆಸರಿನಲ್ಲಿ ಮೊಬೈಲ್ನ ಬೇರೆಡೆಯಲ್ಲಿರುತ್ತವೆ. ಅವುಗಳನ್ನು ಹುಡುಕಿ ಅಳಿಸುವುದು ಕಷ್ಟ. ಹೀಗಿದ್ದಾಗ ಅಂಥಹ ಫೈಲ್‌ಗಳನ್ನು ಅಳಿಸಲು ಕೆಲವು ಸಾಫ್ಟ್ವೇರ್ನ ಅಗತ್ಯವಿದೆ. ಅದರ ಜೊತೆಗೆ iShredder, Shreddit- Data Eraser ಎಂಬ ಆ್ಯಪ್‌ಗಳನ್ನು ಬಳಸಬಹುದು.
ಇವುಗಳಲ್ಲಿ ಯಾವುದಾದರೂ ಆ್ಯಪ್ ಅನ್ನು ಇನ್ಸ್ಟಾಲ್ ಮಾಡಿಕೊಂಡ ನಂತರ ಫೈಲ್‌ಗಳನ್ನು ಆಕ್ಸೆಸ್ ಮಾಡಿಕೊಳ್ಳಲು ಆ್ಯಪ್ಗೆ ಅನುಮತಿ ನೀಡಬೇಕಾಗುತ್ತದೆ. ನಂತರ ಆ್ಯಪ್ನ ಹೋಮ್ ಸ್ಕ್ರೀನ್ನಲ್ಲಿರುವ 'ಫ್ರಿಅಪ್ ಸ್ಪೇಸ್' ಎಂಬ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಈ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ ನಿಮ್ಮ ಮೊಬೈಲ್ನಲ್ಲಿ ಎಷ್ಟು ಡೇಟಾವನ್ನು ಖಾಲಿ ಮಾಡಬಹುದು ಎಂಬ ಅಂದಾಜನ್ನು ಆ್ಯಪ್ ಮಾಡಲಿದೆ. ಅದು ಪೂರ್ತಿಯಾದ ತಕ್ಷಣ, ಕಂಟಿನ್ಯೂ ಎಂದು ಕ್ಲಿಕ್ ಮಾಡಿದರೆ, ಫೈಲ್‌ಗಳನ್ನು ಶಾಶ್ವತವಾಗಿ ಡಿಲೀಟ್ ಮಾಡಲಾಗುತ್ತದೆ. ಆ ಆ್ಯಪ್ ಮೂಲಕ ನೀವು ಡಿಲೀಟ್ ಮಾಡಿದ ಫೈಲ್‌ಗಳನ್ನು ರಿಸ್ಟೋರ್ ಮಾಡಲು ಸಾಧ್ಯವಾಗುವುದಿಲ್ಲ. ಈ ಆ್ಯಪ್ಗಳು ಒಂದೇ ಫೈಲ್ ಬೇರೆ ಬೇರೆ ಹೆಸರುಗಳಲ್ಲಿದ್ದರೆ, ಅದರಲ್ಲಿ ಒಂದನ್ನು ಡಿಲೀಟ್ ಮಾಡುತ್ತದೆ.
ಆ್ಯಪ್ ಮೂಲಕ ಡಿಲೀಟ್ ಮಾಡಲು ಇಷ್ಟವಿರದಿದ್ದರೆ:ಒಂದು ವೇಳೆ ನಿಮಗೆ ಆ್ಯಪ್‌ಗಳನ್ನು ಬಳಸಿ, ಫೈಲ್‌ಗಳನ್ನು ಡಿಲೀಟ್ ಮಾಡಲು ಇಷ್ಟವಿರದಿದ್ದರೆ, ಫೋನ್ ಅನ್ನು ಕಂಪ್ಯೂಟರ್‌ಗೆ ಕನೆಕ್ಟ್ ಮಾಡಿ, ಡಿಲೀಟ್ ಮಾಡಬಹುದು. ಇದಕ್ಕಾಗಿ ನೀವು ಯುಎಸ್ಬಿ ಕೇಬಲ್ ಅನ್ನು ಬಳಸಬೇಕಾಗುತ್ತದೆ. ಯುಎಸ್ಬಿ ವೈರ್ನಿಂದ ಕನೆಕ್ಟ್ ಮಾಡಿದ ತಕ್ಷಣ, ಆಟೋ ಪ್ಲೇ ಎಂಬ ಆಯ್ಕೆ ಕಾಣಿಸುತ್ತದೆ. ಅದರಲ್ಲಿ ಓಪನ್ ಡಿವೈಸ್ ಟು ವ್ಯೂ ಫೈಲ್ಸ್ ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಬೇಕಾಗುತ್ತದೆ. ನಂತರ ಕಂಪ್ಯೂಟರ್ನಲ್ಲಿ ಮೈ ಕಂಪ್ಯೂಟರ್ ಐಕಾನ್ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ಫೋನ್ ಐಕಾನ್ ಕಾಣಿಸುತ್ತದೆ. ಅದನ್ನು ಓಪನ್ ಮಾಡಿದಾಗ, ನಿಮಗೆ ಫೈಲ್ಗಳು ಕಾಣಿಸುತ್ತವೆ. ಆಗ ನೀವು ಅನಾವಶ್ಯಕವಾಗ ಫೈಲ್‌ಗಳನ್ನು ಡಿಲೀಟ್ ಮಾಡಬಹುದು.