ಲಂಡನ್ (ಇಂಗ್ಲೆಂಡ್) :ಶತಮಾನಗಳಿಂದ ಬೆಳಕನ್ನೆ ಕಾಣದ ಚಂದ್ರನ ದಕ್ಷಿಣ ಧ್ರುವಕ್ಕೆ ಚಂದ್ರಯಾನ-3 ನೌಕೆಯ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಇಳಿಸಿದ ಭಾರತವನ್ನೀಗ ವಿಶ್ವವೇ ಹಾಡಿ ಹೊಗಳುತ್ತಿದೆ. ಬಾಹ್ಯಾಕಾಶ ಯಾನದಲ್ಲಿ ಸಾಧಿಸಿದ ವಿಕ್ರಮವನ್ನು ಅಮೆರಿಕದ ನಾಸಾ, ರಷ್ಯಾ, ಫ್ರಾನ್ಸ್, ಇಂಗ್ಲೆಂಡ್ ಸೇರಿದಂತೆ ವಿವಿಧ ದೇಶಗಳು ಮೆಚ್ಚಿಕೊಂಡು 'ಭಲೇ ಭಾರತ' ಎಂದಿವೆ.
ಇಂಗ್ಲೆಂಡ್ ಸಂಸತ್ ಸದಸ್ಯ ಲಾರ್ಡ್ ರಾಮಿ ರೇಂಜರ್ ಕೂಡ ಭಾರತದ ಚಂದ್ರಯಾನ-3 ಯಶಸ್ವಿ ಲ್ಯಾಂಡಿಂಗ್ಗೆ ಅಭಿನಂದಿಸಿದ್ದಾರೆ. ಚಂದ್ರನ ಮೇಲೆ ಯಾವುದೇ ದೇಶ ಮಾಡದ ಸಾಧನೆಯನ್ನು ಭಾತರ ಮಾಡಿ, ಇತಿಹಾಸ ನಿರ್ಮಿಸಿದೆ ಎಂದು ಹೊಗಳಿದ್ದಾರೆ.
ಭಾರತದ ವಿಕ್ರಮವನ್ನು ಇಡೀ ಜಗತ್ತೇ ಬೆಕ್ಕಸ ಬೆರಗಾಗಿ ನೋಡುತ್ತಿದೆ. ಯಾವುದೇ ದೇಶವು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದಿರಲಿಲ್ಲ. ಅದನ್ನು ಇಸ್ರೋ ಮಾಡಿದೆ. ಇದು ಇತಿಹಾಸವೇ ಸರಿ. ನಮ್ಮೆಲ್ಲರಿಗೂ ಇದು ತುಂಬಾ ಭಾವನಾತ್ಮಕ ದಿನವಾಗಿತ್ತು. ನಾನು ಚಂದ್ರಸ್ಪರ್ಶವನ್ನು ನೋಡಿದೆ. ತುಂಬಾ ಆತಂಕದ ಮತ್ತು ಕೌತುಕದ ಕ್ಷಣವಾಗಿತ್ತು. ವರ್ಷಗಳ ಶ್ರಮ ಇದರಲ್ಲಿ ಗೋಚರವಾಗುತ್ತದೆ. ವಿಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರಕ್ಕೆ ಭಾರತದ ಕೊಡುಗೆ ಅಪಾರವಾಗಿದೆ ಎಂದು ಹೇಳಿದ್ದಾರೆ.
ಮತ್ತೊಬ್ಬ ಬ್ರಿಟಿನ್ ಸಂಸದ ವೀರೇಂದ್ರ ಶರ್ಮಾ ಅವರು, ಚಂದ್ರಯಾನ-3 ರ ಯಶಸ್ಸಿಗೆ ಭಾರತೀಯ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ. ಭಾರತ, ಭಾರತೀಯರು ಮತ್ತು ಚಂದ್ರನ ಮೇಲೆ ಚಂದ್ರಯಾನ-3 ಲ್ಯಾಂಡಿಂಗ್ನಲ್ಲಿ ಭಾಗಿಯಾಗಿರುವ ಎಲ್ಲರಿಗೂ ಅಭಿನಂದನೆ. ಇಡೀ ಜಗತ್ತೇ ಸಂತಸಪಟ್ಟಿದೆ. ಪ್ರಪಂಚದಾದ್ಯಂತ ಇರುವ ಭಾರತೀಯರು ಸಂತೋಷವಾಗಿದ್ದಾರೆ. ಭವಿತವ್ಯದ ಎಲ್ಲ ಪ್ರಯತ್ನಗಳಿಗೆ ಶುಭ ಹಾರೈಕೆಗಳು ಎಂದಿದ್ದಾರೆ.
ರಷ್ಯಾ, ಅಮೇರಿಕಾ, ಚೀನಾದ ಬಳಿಕ ಚಂದ್ರನ ಮೇಲೆ ನೌಕೆ ಇಳಿಸಿದ ನಾಲ್ಕನೇ ದೇಶ ಮತ್ತು ಕತ್ತಲೆ ಪ್ರಪಂಚವಾದ ದಕ್ಷಿಣ ಧ್ರುವದಲ್ಲಿ ಉಪಗ್ರಹವೊಂದನ್ನು ಯಶಸ್ವಿಯಾಗಿ ಲ್ಯಾಂಡ್ ಮಾಡಿದ ಮೊದಲ ರಾಷ್ಟ್ರ ಭಾರತವಾಗಿದೆ. ಇದು ಮುಂದಿನ ಬಾಹ್ಯಾಕಾಶ ಯಾನಗಳಿಗೆ ದಾರಿ ಮಾಡಿಕೊಟ್ಟಿದೆ.