ನವದೆಹಲಿ: ಮುಂದಿನ ಎರಡು-ಮೂರು ತ್ರೈಮಾಸಿಕಗಳಲ್ಲಿ ಭಾರತದ ಐಟಿ ವಲಯದ ನೇಮಕಾತಿ ಬಹುತೇಕ ಸ್ತಬ್ಧವಾಗುವ ಸಾಧ್ಯತೆಯಿದೆ ಎಂದು ಹೊಸ ವರದಿಯೊಂದು ಸೋಮವಾರ ತಿಳಿಸಿದೆ. ಬೇಡಿಕೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಐಟಿ ಕಂಪನಿಗಳು ತಮ್ಮ ಲಾಭವನ್ನು ಸ್ಥಿರವಾಗಿಟ್ಟುಕೊಳ್ಳುವ ಪ್ರಯತ್ನದಲ್ಲಿ ಹೊಸ ನೇಮಕಾತಿಗಳನ್ನು ಕಡಿಮೆ ಮಾಡಲಿವೆ ಎಂದು ವರದಿ ಹೇಳಿದೆ.
ಕೋವಿಡ್ -19 ಸಾಂಕ್ರಾಮಿಕ ಅಲೆಯ ನಂತರ ಡಿಜಿಟಲೀಕರಣದ ಬೇಡಿಕೆ ವೇಗಗೊಂಡಿದ್ದರಿಂದ, ಭಾರತೀಯ ಐಟಿ ಸೇವಾ ಕಂಪನಿಗಳು ಹಣಕಾಸು ವರ್ಷ 2021 ರ ಎರಡನೇ ತ್ರೈಮಾಸಿಕದಿಂದ ಹಣಕಾಸು ವರ್ಷ 2023 ರ ಎರಡನೇ ತ್ರೈಮಾಸಿಕದವರೆಗೆ ವ್ಯಾಪಕವಾಗಿ ಉದ್ಯೋಗಿಗಳನ್ನು ನೇಮಿಸಿಕೊಂಡಿವೆ ಎಂದು ಕ್ರೆಡಿಟ್ ರೇಟಿಂಗ್ ಏಜೆನ್ಸಿ ಐಸಿಆರ್ಎ ವರದಿ ತಿಳಿಸಿದೆ.
ಅದೇ ಸಮಯದಲ್ಲಿ 2022-23ರ ಅವಧಿಯಲ್ಲಿ ಪ್ರತಿಭಾವಂತ ಉದ್ಯೋಗಿಗಳಿಗೆ ಬೇಡಿಕೆ ಹೆಚ್ಚಿದ್ದರಿಂದ ಇರುವ ಕಂಪನಿ ಬಿಟ್ಟು ಬೇರೆ ಕಡೆ ಕೆಲಸಕ್ಕೆ ಸೇರುವ ಉದ್ಯೋಗಿಗಳ ಪ್ರಮಾಣ ಶೇಕಡಾ 22 ರಿಂದ 23 ಕ್ಕೆ ಹೆಚ್ಚಳವಾಗಿದೆ. ಈ ಕಾರಣದಿಂದ 2022ರ ಹಣಕಾಸು ವರ್ಷದಲ್ಲಿ 2,73,000 ಮತ್ತು 2023ರ ಮೊದಲ ತ್ರೈಮಾಸಿಕದಲ್ಲಿ 94,400 ಉದ್ಯೋಗಿಗಳನ್ನು ಉದ್ಯಮದ ಅಗ್ರ ಐದು ಕಂಪನಿಗಳು ನೇಮಕ ಮಾಡಿಕೊಳ್ಳಲು ಕಾರಣವಾಯಿತು.