ಸ್ಯಾನ್ ಫ್ರಾನ್ಸಿಸ್ಕೋ : ನೀವು ಪಿಕ್ಸೆಲ್ ವಾಚ್ ಹೊಂದಿದ್ದರೆ ಮತ್ತು ಆಕಸ್ಮಿಕವಾಗಿ ಅದರ ಸ್ಕ್ರೀನ್ ಒಡೆದುಹೋದರೆ ಅದನ್ನು ಮತ್ತೆ ರಿಪೇರಿ ಮಾಡಿಸಲು ಸಾಧ್ಯವೇ ಇಲ್ಲ. ಅಧಿಕೃತವಾಗಿ ಗೂಗಲ್ನಿಂದ ಅದನ್ನು ಮತ್ತೆ ಸರಿಪಡಿಸುವ ಯಾವುದೇ ಅವಕಾಶ ನಿಮಗಿಲ್ಲ. ಪಿಕ್ಸೆಲ್ ವಾಚ್ ಹಾಳಾದರೆ ಅದನ್ನು ರಿಪೇರಿ ಮಾಡುವ ಯಾವುದೇ ಸರ್ವಿಸ್ ಸೆಂಟರ್ ಅನ್ನು ಗೂಗಲ್ ಹೊಂದಿಲ್ಲದಿರುವುದೇ ಇದಕ್ಕೆ ಕಾರಣ.
ರೆಡ್ಡಿಟ್ ಮತ್ತು ಗೂಗಲ್ ಸಪೋರ್ಟ್ ಪೇಜ್ಗಳಲ್ಲಿ ಹಲವಾರು ಪಿಕ್ಸೆಲ್ ವಾಚ್ ಮಾಲೀಕರು ಈ ಬಗ್ಗೆ ಬರೆದಿದ್ದು, ವಾಚ್ನ ಒಡೆದು ಹೋದ ಸ್ಕ್ರೀನ್ ಅನ್ನು ರಿಪೇರಿ ಮಾಡಿಸಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಹತಾಶೆಯನ್ನು ಹೊರಹಾಕಿದ್ದಾರೆ. ಸಪೋರ್ಟ್ ಪೇಜ್ನಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಗೂಗಲ್ ಪ್ರತಿನಿಧಿಯೊಬ್ಬರು, "ಗೂಗಲ್ ಯಾವುದೇ ದುರಸ್ತಿ ಕೇಂದ್ರಗಳು ಅಥವಾ ಸೇವಾ ಕೇಂದ್ರಗಳನ್ನು ಹೊಂದಿಲ್ಲ" ಎಂದು ಹೇಳಿದ್ದಾರೆ.
"ಈಗಿರುವಂತೆ ಗೂಗಲ್ ಪಿಕ್ಸೆಲ್ ವಾಚ್ ಅನ್ನು ದುರಸ್ತಿ ಮಾಡಿಸಿಕೊಳ್ಳುವ ಯಾವುದೇ ಅವಕಾಶವಿಲ್ಲ. ನಿಮ್ಮ ವಾಚ್ ಹಾನಿಗೊಳಗಾದರೆ, ಅದನ್ನು ಬೇರೊಂದು ವಾಚ್ನ ಜೊತೆಗೆ ಬದಲಾಯಿಸಿಕೊಳ್ಳಲು ನೀವು ಗೂಗಲ್ ಪಿಕ್ಸೆಲ್ ವಾಚ್ ಗ್ರಾಹಕ ಸಪೋರ್ಟ್ ತಂಡವನ್ನು ಸಂಪರ್ಕಿಸಬಹುದು" ಎಂದು ಗೂಗಲ್ ವಕ್ತಾರ ಬ್ರಿಡ್ಜೆಟ್ ಸ್ಟಾರ್ಕಿ ಹೇಳಿದ್ದಾರೆ.