ಸ್ಯಾನ್ ಫ್ರಾನ್ಸಿಸ್ಕೋ: ಹದಿಹರೆಯದವರನ್ನು ಸಾಮಾಜಿಕ ಮಾಧ್ಯಮಗಳಿಂದ ನಿಷೇಧಿಸದಂತೆ ಗೂಗಲ್ ಯುಎಸ್ ಕಾಂಗ್ರೆಸ್ಗೆ ಮನವಿ ಮಾಡಿದೆ. ಸಾಮಾಜಿಕ ಮಾಧ್ಯಮ ಬಳಸಲು ವಯಸ್ಸಿನ ಪರಿಶೀಲನೆ ತಂತ್ರಜ್ಞಾನ (age-verification technology) ಅಳವಡಿಸುವಂಥ ಸಮಸ್ಯಾತ್ಮಕ ರಕ್ಷಣಾ ಕ್ರಮಗಳನ್ನು ಅದು ಕೈಬಿಡುವಂತೆ ಸಂಸದರನ್ನು ಒತ್ತಾಯಿಸಿದೆ.
ಸೆನೆಟರ್ ಎಲಿಜಬೆತ್ ವಾರೆನ್ (ಡಿ-ಎಂಎ) ಹಾಗೂ ಇನ್ನೂ ಹಲವಾರು ಸಂಸದರು ಮಕ್ಕಳ ಆನ್ಲೈನ್ ಸುರಕ್ಷತಾ ಕಾಯ್ದೆ ಜಾರಿಗೊಳಿಸುವಂತೆ ಒತ್ತಾಯಿಸಿದ ನಂತರ ಟೆಕ್ ದೈತ್ಯ ಗೂಗಲ್ ತನ್ನ 'ಆನ್ಲೈನ್ನಲ್ಲಿ ಮಕ್ಕಳು ಮತ್ತು ಹದಿಹರೆಯದವರನ್ನು ರಕ್ಷಿಸುವ ಶಾಸಕಾಂಗ ಮಾರ್ಗಸೂಚಿ' ಅನ್ನು ಬಿಡುಗಡೆ ಮಾಡಿದೆ.
ಆನ್ಲೈನ್ ಬಳಕೆಯಲ್ಲಿ ಸುಧಾರಣೆಗಳನ್ನು ತರಲು ಮತ್ತು ಇಂಟರ್ನೆಟ್ ಬಳಸುವಾಗ ಮಕ್ಕಳು ಮತ್ತು ಹದಿಹರೆಯದವರನ್ನು ಸುರಕ್ಷಿತವಾಗಿಡಲು ಪ್ರಯತ್ನಿಸುವ ಕಾನೂನುಗಳಿಗೆ ಕೆಲ ತತ್ವಗಳನ್ನು ಈ ಮಾರ್ಗಸೂಚಿ ರೂಪಿಸುತ್ತದೆ ಎಂದು ಗೂಗಲ್ ಮತ್ತು ಆಲ್ಫಾಬೆಟ್ನ ಜಾಗತಿಕ ವ್ಯವಹಾರಗಳ ಅಧ್ಯಕ್ಷ ಕೆಂಟ್ ವಾಕರ್ ಹೇಳಿದ್ದಾರೆ.
"ನಮ್ಮ ಅನುಭವಗಳು ಮತ್ತು ದೃಷ್ಟಿಕೋನಗಳನ್ನು ಹಂಚಿಕೊಳ್ಳುವುದರಿಂದ ಸಮಸ್ಯೆಗಳ ಪರಿಹಾರದಲ್ಲಿ ತೊಡಗಿಸಿಕೊಂಡಿರುವ ನೀತಿ ನಿರೂಪಕರು ಮತ್ತು ಕಾನೂನು ತಜ್ಞರ ಕೆಲಸದಲ್ಲಿ ಸಹಾಯಕವಾಗಲಿದೆ ಎಂದು ನಾವು ಭಾವಿಸುತ್ತೇವೆ ಮತ್ತು ಅವರೊಂದಿಗೆ ರಚನಾತ್ಮಕವಾಗಿ ತೊಡಗಿಸಿಕೊಳ್ಳಲು ನಾವು ಎದುರು ನೋಡುತ್ತಿದ್ದೇವೆ" ಎಂದು ವಾಕರ್ ಸೋಮವಾರ ತಡರಾತ್ರಿ ಹೇಳಿದರು.