ನವದೆಹಲಿ: ಡೀಫಾಲ್ಟ್ ಆಗಿ ಥರ್ಡ್ ಪಾರ್ಟಿ ಕುಕೀಗಳಿಗೆ ವೆಬ್‌ಸೈಟ್ ಪ್ರವೇಶವನ್ನು ನಿರ್ಬಂಧಿಸುವ ಮೂಲಕ ಕ್ರಾಸ್-ಸೈಟ್ ಟ್ರ್ಯಾಕಿಂಗ್ ಮಿತಿಗೊಳಿಸುವ ಹೊಸ ವೈಶಿಷ್ಟ್ಯವನ್ನು ಗೂಗಲ್ ಪರೀಕ್ಷಿಸಲು ಪ್ರಾರಂಭಿಸಿದೆ. ಪರೀಕ್ಷೆಯ ಭಾಗವಾಗಿ ಆರಂಭದಲ್ಲಿ ಕಂಪನಿಯು ಜಾಗತಿಕವಾಗಿ ಶೇಕಡಾ 1ರಷ್ಟು ಕ್ರೋಮ್ ಬಳಕೆದಾರರಿಗೆ (ಸುಮಾರು 30 ಮಿಲಿಯನ್ ಬಳಕೆದಾರರು) 'ಟ್ರ್ಯಾಕಿಂಗ್ ಪ್ರೊಟೆಕ್ಷನ್' ವೈಶಿಷ್ಟ್ಯವನ್ನು ಜಾರಿಗೊಳಿಸಿದೆ. ಇದು 2024ರ ದ್ವಿತೀಯಾರ್ಧದ ವೇಳೆಗೆ ಎಲ್ಲರಿಗೂ ಥರ್ಡ್-ಪಾರ್ಟಿ ಕುಕೀಗಳನ್ನು ಹಂತ ಹಂತವಾಗಿ ತೆಗೆದುಹಾಕುವ ಗೂಗಲ್ನ 'ಪ್ರೈವಸಿ ಸ್ಯಾಂಡ್ಬಾಕ್ಸ್' ಉಪಕ್ರಮದ ಭಾಗವಾಗಿದೆ.
"ಈ ಕ್ರಮವು ಯುಕೆಯ ಸ್ಪರ್ಧೆ ಮತ್ತು ಮಾರುಕಟ್ಟೆ ಪ್ರಾಧಿಕಾರವು ಕಡ್ಡಾಯಗೊಳಿಸಿರುವ ನಿಯಮಗಳ ಪೈಕಿ ಬಾಕಿ ಉಳಿದ ನಿಯಮಗಳನ್ನು ಪೂರೈಸುವ ಅಗತ್ಯಕ್ಕೆ ಪೂರಕವಾಗಿದೆ" ಎಂದು ಗೂಗಲ್ ಹೇಳಿದೆ.
ಈ ವರ್ಷದ ಕೊನೆಯಲ್ಲಿ ಕುಕೀಗಳನ್ನು ತೆಗೆದುಹಾಕಲು 'ಟ್ರ್ಯಾಕಿಂಗ್ ಪ್ರೊಟೆಕ್ಷನ್' ವೈಶಿಷ್ಟ್ಯವನ್ನು ಸಂಪೂರ್ಣವಾಗಿ ಜಾರಿಗೊಳಿಸಲು ಕಂಪನಿಯು ಯೋಜಿಸಿದೆ. ಥರ್ಡ್-ಪಾರ್ಟಿ ಕುಕೀಗಳು ಸುಮಾರು ಮೂರು ದಶಕಗಳಿಂದ ವೆಬ್‌ನ ಮೂಲಭೂತ ಭಾಗವಾಗಿದೆ. ನಿಮ್ಮ ವೆಬ್‌ಸೈಟ್ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಲು ಅವುಗಳನ್ನು ಬಳಸಬಹುದಾದರೂ, ಸೈಟ್ಗಳು ಅವುಗಳನ್ನು ಗ್ರಾಹಕರ ಆನ್ಲೈನ್ ಅನುಭವಗಳನ್ನು ಉತ್ತಮಗೊಳಿಸಲು ಸಹ ಬಳಸಿವೆ. ಉದಾಹರಣೆಗೆ- ಲಾಗ್ ಇನ್ ಮಾಡಲು ನಿಮಗೆ ಸಹಾಯ ಮಾಡುವುದು ಅಥವಾ ನಿಮಗೆ ಸರಿ ಹೊಂದುವ ಜಾಹೀರಾತುಗಳನ್ನು ತೋರಿಸುವುದು.