ಸರ್ಚ್ ಎಂಜಿನ್ ಗೂಗಲ್‌ನ ಹೊಸ ಟ್ಯಾಬ್ ತೆರೆದಂತೆ ವಿಭಿನ್ನ ಡೂಡಲ್ ಕಾಣಿಸುತ್ತದೆ. ಜಾಗತಿಕ ಟೆಕ್ ಸಂಸ್ಥೆಯು ತನ್ನ ಇಂದಿನ ಡೂಡಲ್‌ನಲ್ಲಿ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಬಿಡುಗಡೆ ಮಾಡಿದ ಫೋಟೋಗಳನ್ನು ಪ್ರದರ್ಶಿಸಿದೆ.
ಬ್ರಹ್ಮಾಂಡ ಉಗಮದ ಕೌತುಕ ಅನಾವರಣ:ನ್ಯಾಷನಲ್ ಏರೋನಾಟಿಕ್ಸ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (NASA)2021ರ ಡಿಸೆಂಬರ್ನಲ್ಲಿ ಹಾರಿಬಿಟ್ಟ ಜೇಮ್ಸ್ ವೆಬ್ ಟೆಲಿಸ್ಕೋಪ್ ಬ್ರಹ್ಮಾಂಡದ ಉಗಮದ ರುದ್ರ ರಮಣೀಯ ದೃಶ್ಯಗಳನ್ನು ಭೂಮಿಗೆ ರವಾನಿಸಿದೆ. ಈ ಪೈಕಿ 3 ಚಿತ್ರಗಳನ್ನು ನಾಸಾ ಮಂಗಳವಾರ ಬಿಡುಗಡೆ ಮಾಡಿತ್ತು.
ಇವು ಈವರೆಗೆ ಸೆರೆಹಿಡಿಯಲಾದ ಸೌರಮಂಡಲದ ಅತ್ಯಂತ ದೂರದ ಮತ್ತು ಸ್ಪಷ್ಟ ಚಿತ್ರಗಳಾಗಿವೆ. ಈ ನಕ್ಷತ್ರಪುಂಜಗಳಲ್ಲಿ ಯಾವುದೇ ಜೀವರಾಶಿಯ ಇರುವಿಕೆ ಇಲ್ಲವಾದರೂ ಕೂಡ ಬ್ರಹ್ಮಾಂಡದ ಕುರಿತು ಇನ್ನಷ್ಟು ಆಳ ಅಧ್ಯಯನಕ್ಕೆ ನೆರವಾಗುವ ಭರವಸೆ ಇದೆ. ನಾಸಾದ ಹೊಸ ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕದಿಂದ ಅತಿಗೆಂಪು ಬೆಳಕಿನಲ್ಲಿ ಸೆರೆಹಿಡಿಯಲಾದ ಚಿತ್ರವು ಮೊದಲ ಬಾರಿಗೆ ನಕ್ಷತ್ರದ ಜನನದ ಹಿಂದಿನ ಅಗೋಚರ ಪ್ರದೇಶಗಳನ್ನು ಬಹಿರಂಗಪಡಿಸುತ್ತದೆ.
ಕಾಸ್ಮಿಕ್ ಬಂಡೆಗಳು ಮತ್ತು ನಕ್ಷತ್ರಗಳು
ಕ್ಯಾರಿನಾ ನೆಬ್ಯುಲಾ, ಸದರ್ನ್ ರಿಂಗ್ ನೆಬ್ಯುಲಾ ಮತ್ತು ಸ್ಟೀಫನ್ಸ್ ಕ್ವಿಂಟೆಟ್ ಎಂಬ 3 ಚಿತ್ರಗಳನ್ನು ನಾಸಾ ಬಿಡುಗಡೆ ಮಾಡಿದೆ. ಚಿತ್ರದ ಆವೃತ್ತಿಗಳು ಪ್ರಸ್ತುತ ನಾಸದ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ನೀಲಿ, ಕಿತ್ತಳೆ ಹಾಗೂ ಬಿಳಿಬಣ್ಣದ ಆಕರ್ಷಕವಾದ ನಕ್ಷತ್ರಪುಂಜಗಳನ್ನು ಈ ಫೋಟೋಗಳು ಒಳಗೊಂಡಿದೆ. ನಾಸಾ ಬಿಡುಗಡೆ ಮಾಡಿದ ಚಿತ್ರಗಳಲ್ಲಿ ನಶಿಸುತ್ತಿರುವ ಕಿತ್ತಳೆ ಬಣ್ಣದ ನಕ್ಷತ್ರವೊಂದರ ದೃಶ್ಯ ಮತ್ತು ಅದನ್ನು ಸುತ್ತುವರೆದಿರುವ ಬೃಹತ್ ಅನಿಲ ಮೋಡಗಳು, ಹಲವು ಹೊಸ ನಕ್ಷತ್ರಗಳ ರಚನೆಯ ದೃಶ್ಯಗಳು ಬ್ರಹ್ಮಾಂಡದಲ್ಲಿನ ಅಪಾರ ವಸ್ತುಗಳನ್ನು ತನ್ನತ್ತ ಸೆಳೆದುಕೊಳ್ಳುತ್ತಿರುವ ಕೌತುಕದ ದೃಶ್ಯಗಳಿವೆ.
2,500 ಬೆಳಕಿನ ವರ್ಷ (1 ಬೆಳಕಿನ ವರ್ಷವೆಂದರೆ 5.8ಲಕ್ಷ ಕೋಟಿ ಮೈಲು)ದೂರದಲ್ಲಿನ ಸದರ್ನ್ ರಿಂಗ್ ಎಂದು ಕರೆಯಲಾಗುವ ಆಕಾಶಗಂಗೆ (ನೆಬ್ಯುಲಾ) ತನ್ನ ವಿಸ್ತಾರವನ್ನು ಮತ್ತಷ್ಟು ವಿಸ್ತರಿಸುತ್ತಿರುವ ಸುಂದರ ದೃಶ್ಯಗಳಿವೆ. ಇನ್ನೊಂದು ಚಿತ್ರದಲ್ಲಿ 29 ಕೋಟಿ ಬೆಳಕಿನ ವರ್ಷದಷ್ಟು ದೂರವಿರುವ 5 ನಕ್ಷತ್ರ ಪುಂಜಗಳು ಕಾಸ್ಮಿಕ್ ಡ್ಯಾನ್ಸ್ ಮೂಲಕ ಅವನತಿಯ ಹಾದಿಯಲ್ಲಿರುವ ನೋಟವಿದೆ. ಇನ್ನೊಂದು ಚಿತ್ರದಲ್ಲಿ ವ್ಯಾಸ್ಟ್ 96-ಬಿ ಎಂದು ಗುರುತಿಸಲಾದ ನೀಲಿ ಬಣ್ಣದ ಬೃಹತ್ ಗ್ರಹ ಇದ್ದು, 1150 ಬೆಳಕಿನ ವರ್ಷದಷ್ಟು ದೂರದಲ್ಲಿ ಸೆರೆಯಾಗಿದೆ.
ಅವನತಿ ಹೊಂದುತ್ತಿರುವ ನಕ್ಷತ್ರವು ಧೂಳು ಮತ್ತು ಬೆಳಕಿನ ಪದರಗಳಿಂದ ಕೂಡಿರುವುದು
ಪ್ರತಿಯೊಂದು ಚಿತ್ರವೂ ಹೊಸ ಆವಿಷ್ಕಾರವಾಗಿದೆ ಎಂದು ನಾಸಾದ ಆಡಳಿತಾಧಿಕಾರಿ ಬಿಲ್ ನೆಲ್ಸನ್ ಹೇಳಿದ್ದಾರೆ. ನಾವು ಹಿಂದೆಂದೂ ನೋಡಿರದ ಬ್ರಹ್ಮಾಂಡದ ಬಗ್ಗೆ ಪ್ರತಿಯೊಂದು ಚಿತ್ರವೂ ಮನುಕುಲಕ್ಕೆ ಒಂದು ನೋಟವನ್ನು ನೀಡುತ್ತದೆ. ಈ ಚಿತ್ರವು ಬ್ರಹ್ಮಾಂಡದ ಒಂದು ಸಣ್ಣ ಭಾಗವನ್ನು ಮಾತ್ರ ತೋರಿಸುತ್ತದೆ. ಕೇವಲ ಒಂದು ನಕ್ಷತ್ರಪುಂಜವಿದೆ ಎಂದು ನೂರು ವರ್ಷದ ಹಿಂದೆ ನಾವು ಭಾವಿಸಿದ್ದೆವು. ಈಗ ಈ ಸಂಖ್ಯೆ ಅಪರಿಮಿತವಾಗಿದೆ. ನಮ್ಮ ನಕ್ಷತ್ರಪುಂಜದಲ್ಲಿ ಕೋಟ್ಯಂತರ ನಕ್ಷತ್ರಗಳು ಅಥವಾ ಸೂರ್ಯರಿದ್ದಾರೆ. ಕೋಟ್ಯಂತರ ನಕ್ಷತ್ರ, ಸೂರ್ಯರನ್ನು ಹೊಂದಿರುವ ಕೋಟ್ಯಂತರ ನಕ್ಷತ್ರಪುಂಜಗಳಿವೆ. ನಾವೀಗ ಅದರ ಪ್ರಥಮ ಕಿರುನೋಟವನ್ನು ಗಮನಿಸಿದ್ದೇವೆ ಎಂದು ಅವರು ವಿವರಿಸಿದರು.
ಇದನ್ನೂ ಓದಿ:ಬಿಗ್‌ಬ್ಯಾಂಗ್ ನಂತರ ರೂಪುಗೊಂಡ ಆರಂಭಿಕ ನಕ್ಷತ್ರಪುಂಜಗಳ ಮೊಟ್ಟ ಮೊದಲ ಚಿತ್ರ!