ನವದೆಹಲಿ:ಪ್ರಸ್ತುತ ಮಾರುಕಟ್ಟೆ ಪರಿಸ್ಥಿತಿಗಳನ್ನು ನೋಡಿದರೆ 2024 ರ ವೇಳೆಗೆ ಭಾರತ ನಿರ್ಮಿತ ಐಫೋನ್ ರಫ್ತು ಜಾಗತಿಕವಾಗಿ ಶೇಕಡಾ 20 ರಿಂದ 25 ಕ್ಕೆ ವೃದ್ಧಿಯಾಗಲಿದೆ ಎಂದು ಪ್ರಮುಖ ವಿಶ್ಲೇಷಕರು ಹೇಳಿದ್ದಾರೆ. ಟಿಎಫ್ ಇಂಟರ್ನ್ಯಾಷನಲ್ ಸೆಕ್ಯುರಿಟೀಸ್ನ ಮಿಂಗ್-ಚಿ ಕುವೊ ಅವರ ಪ್ರಕಾರ, ಈ ವರ್ಷ ಆಪಲ್ನ ಜಾಗತಿಕ ಐಫೋನ್ ರಫ್ತುಗಳ ಪೈಕಿ ಮೇಡ್ ಇನ್ ಇಂಡಿಯಾ ಐಫೋನ್ಗಳು ಶೇಕಡಾ 12 ರಿಂದ 14 ರಷ್ಟು ಪಾಲು ಹೊಂದಿರುತ್ತವೆ ಎಂದು ಅಂದಾಜಿಸಲಾಗಿದೆ.
ಮೀಡಿಯಮ್ ಬ್ಲಾಗ್ ಪೋಸ್ಟ್ ನಲ್ಲಿ ಈ ಬಗ್ಗೆ ಉಲ್ಲೇಖಿಸಿರುವ ಮಿಂಗ್-ಚಿ ಕುವೊ, ಆಪಲ್ ಗೆ ದಕ್ಷಿಣ ಏಷ್ಯಾದ ಮಾರುಕಟ್ಟೆಯು ಪ್ರಮುಖ ಮಾರುಕಟ್ಟೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ತೈವಾನ್ ತಂತ್ರಜ್ಞಾನ ಕಂಪನಿ ಫಾಕ್ಸ್ಕಾನ್ ಕಂಪನಿ ಪ್ರಸ್ತುತ ಭಾರತದ ಐಫೋನ್ ಉತ್ಪಾದನಾ ಸಾಮರ್ಥ್ಯದ ಶೇಕಡಾ 75 ರಿಂದ 80 ರಷ್ಟು ಪಾಲನ್ನು ಹೊಂದಿದೆ ಎಂದು ಅವರು ಹೇಳಿದರು.
ಭಾರತದಲ್ಲಿ ಐಫೋನ್ಗಳನ್ನು ತಯಾರಿಸುತ್ತಿರುವ ವಿಸ್ಟ್ರಾನ್ ಅನ್ನು ಟಾಟಾ ಗ್ರೂಪ್ ಇತ್ತೀಚೆಗೆ ಸ್ವಾಧೀನಪಡಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಈ ಕಾರ್ಖಾನೆ ಹೆಚ್ಚಿನ ಐಫೋನ್ಗಳನ್ನು ಉತ್ಪಾದಿಸುವ ನಿರೀಕ್ಷೆಯಿದೆ.
"ಭಾರತದಲ್ಲಿ ಐಫೋನ್ ತಯಾರಿಸಲು ಟಾಟಾ ಗ್ರೂಪ್ನೊಂದಿಗೆ ಒಪ್ಪಂದ ಮಾಡಿಕೊಂಡಿರುವುದರಿಂದ ಭಾರತ ಸರ್ಕಾರದೊಂದಿಗಿನ ಆ್ಯಪಲ್ ಕಂಪನಿಯ ಸಂಬಂಧ ಉತ್ತಮವಾಗಬಹುದು. ಈ ಕ್ರಮವು ಭಾರತದಲ್ಲಿ ಐಫೋನ್ಗಳು ಮತ್ತು ಇತರ ಉತ್ಪನ್ನಗಳ ಭವಿಷ್ಯದ ಮಾರಾಟಕ್ಕೆ ಅನುಕೂಲವಾಗಲಿದೆ ಮತ್ತು ಮತ್ತು ಮುಂದಿನ ದಶಕದಲ್ಲಿ ಆ್ಯಪಲ್ನ ಬೆಳವಣಿಗೆಗೆ ನಿರ್ಣಾಯಕವಾಗಲಿದೆ" ಎಂದು ಅವರು ಹೇಳಿದರು.
ಇದಲ್ಲದೆ, ಚೀನಾದ ಜೆಂಗ್ಝೌ ಮತ್ತು ತೈಯುವಾನ್ನಲ್ಲಿ ಫಾಕ್ಸ್ಕಾನ್ ಉತ್ಪಾದನಾ ಸಾಮರ್ಥ್ಯವು 2024 ರ ವೇಳೆಗೆ ಕ್ರಮವಾಗಿ ಶೇಕಡಾ 35 ರಿಂದ 45 ಮತ್ತು ಶೇಕಡಾ 75 ರಿಂದ 85 ರಷ್ಟು ಕುಸಿಯಲಿದೆ ಎಂದು ಕುವೊ ಅಂದಾಜಿಸಿದ್ದಾರೆ.
ಟಾಟಾ ಗ್ರೂಪ್ ಎರಡೂವರೆ ವರ್ಷಗಳಲ್ಲಿ ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಗಳಿಗಾಗಿ ಭಾರತದಲ್ಲಿ ಆ್ಯಪಲ್ ಐಫೋನ್ ಗಳನ್ನು ತಯಾರಿಸಲು ಪ್ರಾರಂಭಿಸಲಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಅಕ್ಟೋಬರ್ 27 ರಂದು ಪ್ರಕಟಿಸಿದ್ದರು. ಈ ಬೆಳವಣಿಗೆಯು ಭಾರತದ ಬೆಳೆಯುತ್ತಿರುವ ಉತ್ಪಾದನಾ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ ಎಂದು ಅವರು ಹೇಳಿದ್ದರು. ಸುಮಾರು ಒಂದೂವರೆ ವರ್ಷದ ಮಾತುಕೆತೆಗಳ ನಂತರ ಕರ್ನಾಟಕದಲ್ಲಿನ ವಿಸ್ಟ್ರಾನ್ ಕಾರ್ಪ್ ಕಾರ್ಖಾನೆಯನ್ನು ಟಾಟಾ ಗ್ರೂಪ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
ಇದನ್ನೂ ಓದಿ: ಕೃತಕ ಬುದ್ಧಿಮತ್ತೆ(AI) ತಂತ್ರಜ್ಞಾನದ ನಿಯಂತ್ರಣಕ್ಕೆ ಅಮೆರಿಕದಲ್ಲಿ ಹೊಸ ಕಾನೂನು ಜಾರಿ