ನವದೆಹಲಿ:ಜಾಗತಿಕವಾಗಿ ಸ್ಮಾರ್ಟ್ಫೋನ್ ಮಾರಾಟದಲ್ಲಿ ಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ. ಸ್ಮಾರ್ಟ್ಫೋನ್ ಮಾರಾಟ ಪ್ರಮಾಣವು ಮೂರನೇ ತ್ರೈಮಾಸಿಕದಲ್ಲಿ ಶೇಕಡಾ 8 ರಷ್ಟು (ವರ್ಷದಿಂದ ವರ್ಷಕ್ಕೆ) ಕುಸಿದಿದ್ದು, ಇದು ಸತತ ಒಂಬತ್ತನೇ ತ್ರೈಮಾಸಿಕದ ಇಳಿಕೆಯಾಗಿದೆ ಎಂದು ವರದಿ ಹೇಳಿದೆ. ಸ್ಮಾರ್ಟ್ಫೋನ್ ಬದಲಿಸುವ ಅಭ್ಯಾಸದ ಬದಲಾವಣೆಯಿಂದಾಗಿ ವಿಶೇಷವಾಗಿ ಅಭಿವೃದ್ಧಿ ಹೊಂದಿದ ಮಾರುಕಟ್ಟೆಗಳಲ್ಲಿ, 2023 ರ ವರ್ಷಪೂರ್ತಿ ಮಾರುಕಟ್ಟೆ ಕುಸಿಯುವ ನಿರೀಕ್ಷೆಯಿದೆ. ಅಲ್ಲಿಗೆ ಇದು ದಶಕದಲ್ಲಿಯೇ ಅತಿ ಕಡಿಮೆ ಸ್ಮಾರ್ಟ್ಫೋನ್ ಮಾರಾಟದ ಅವಧಿಯಾಗಲಿದೆ.
ಕೌಂಟರ್ ಪಾಯಿಂಟ್ ರಿಸರ್ಚ್ ಪ್ರಕಾರ, ಪ್ರಮುಖವಾಗಿ ಗ್ರಾಹಕರಿಂದ ಬೇಡಿಕೆಯ ಪ್ರಮಾಣದಲ್ಲಿ ನಿರೀಕ್ಷೆಗಿಂತ ನಿಧಾನಗತಿಯ ಚೇತರಿಕೆಯಿಂದಾಗಿ ಸ್ಮಾರ್ಟ್ಫೋನ್ ಮಾರಾಟ ಕುಸಿದಿದೆ. ಆದಾಗ್ಯೂ, ಮಾರುಕಟ್ಟೆಯ ತ್ರೈಮಾಸಿಕ ದಿಂದ ತ್ರೈಮಾಸಿಕ ಮಾರಾಟ ಬೆಳವಣಿಗೆಯು ಶೇಕಡಾ 2ರಷ್ಟು ಹೆಚ್ಚಾಗಿದ್ದು, ಸೆಪ್ಟೆಂಬರ್ನಲ್ಲಿನ ಸಕಾರಾತ್ಮಕ ಬೆಳವಣಿಗೆಯು ಮುಂದಿನ ದಿನಗಳಲ್ಲಿ ಒಳ್ಳೆಯ ಸುದ್ದಿಯನ್ನು ತರಬಹುದು ಎಂದು ನಿರೀಕ್ಷಿಸಲಾಗಿದೆ.
ಸ್ಯಾಮ್ಸಂಗ್ ಈಗಲೂ ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಮುನ್ನಡೆಯನ್ನು ಮುಂದುವರಿಸಿದ್ದು, ಮೂರನೇ ತ್ರೈಮಾಸಿಕದಲ್ಲಿ ಒಟ್ಟು ಮಾರಾಟದ ಐದನೇ ಒಂದು ಭಾಗವನ್ನು ತನ್ನದಾಗಿಸಿಕೊಂಡಿದೆ. ಹೊಸ ತಲೆಮಾರಿನ ಫೋಲ್ಡಬಲ್ ಫೋನ್ಗಳಿಗೆ ಗ್ರಾಹಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಫ್ಲಿಪ್ 5 ಫೋಲ್ಡಬಲ್ ಫೋನ್ ಸುಮಾರು ಎರಡು ಪಟ್ಟು ಹೆಚ್ಚು ಮಾರಾಟವಾಗಿದೆ. ಆದಾಗ್ಯೂ ಮಧ್ಯಮ ಬೆಲೆಯ ಶ್ರೇಣಿಯಲ್ಲಿ ಸ್ಯಾಮ್ಸಂಗ್ನ ಎ-ಸರಣಿ ಸ್ಮಾರ್ಟ್ಫೋನ್ಗಳು ಅತ್ಯಧಿಕವಾಗಿ ಮಾರಾಟವಾಗಿವೆ.