ಲಂಡನ್: ಜಾಗತಿಕ ತಾಪಮಾನದಿಂದ ಹಿಮರಾಶಿ ಕರಗುತ್ತಿದೆ. ಭವಿಷ್ಯದಲ್ಲಿ ಸಮುದ್ರದ ನೀರಿನ ಮಟ್ಟ ಏರಿಕೆಯಾಗಲಿದ್ದು, ಗಂಭೀರ ಅಪಾಯ ಎದುರಿಸುವ ಸಾಧ್ಯತೆ ಇದೆ ಎಂಬ ಕುರಿತು ಈಗಾಗಲೇ ವಿಜ್ಞಾನಿಗಳು ಮತ್ತು ಪರಿಸರ ತಜ್ಞರು ಎಚ್ಚರಿಸಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ಹೊಸ ಸಂಶೋಧನೆಯೊಂದು ಹೊರಬಂದಿದೆ. ಅಂಟಾರ್ಕ್ಟಿಕಾದಲ್ಲಿ ಹಿಮನದಿಗಳ ಕರಗುವಿಕೆ ಮತ್ತು ಸಮುದ್ರದ ಬೆಚ್ಚಗಿನ ನೀರಿನ ಜೊತೆಗೆ ಬೇಸಿಗೆಯಲ್ಲಿ ಕರಾವಳಿ ಭಾಗಗಳಲ್ಲಿ ನೀರಿನ ವೇಗ ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ.
ಈ ಹಿಮನದಿಗಳು ಒಂದು ಕಿ.ಮೀ ಉದ್ದಕ್ಕೆ ಹರಿಯುತ್ತವೆ. ಹೊಸ ಸಂಶೋಧನೆಯಲ್ಲಿ ಈ ಋತುಮಾನದ ವೈಪರೀತ್ಯವೂ ಹಿಮನದಿಗಳ ನೀರಿನ ವೇಗ ಹೆಚ್ಚಿಸಿದ್ದು, ಬೇಸಿಗೆಯ ಬಿಸಿಲಿನಿಂದಾಗಿ ಶೇ 22ರಷ್ಟು ವೇಗ ಪಡೆದುಕೊಂಡಿದೆ. ಹವಾಮಾನ ಬದಲಾವಣೆಯು ಹಿಮನದಿಗಳ ಮೇಲೆ ಪರಿಣಾಮ ಬೀರುತ್ತಿದ್ದು, ಸಮುದ್ರ ಮಟ್ಟ ಹೆಚ್ಚಿಸುವ ಆತಂಕವನ್ನು ಸಂಶೋಧನೆ ತಿಳಿಸಿದೆ.
ಲೀಡ್ಸ್ ವಿಶ್ವವಿದ್ಯಾಲದಯ ವಿಜ್ಞಾನಿಗಳ ತಂಡ ಸಂಶೋಧನೆ ನಡೆಸಿದ್ದು, ಇದಕ್ಕಾಗಿ 10 ಸಾವಿರಕ್ಕೂ ಹೆಚ್ಚು ಸ್ಯಾಟಲೈಟ್ ಇಮೇಜ್ ಪಡೆಯಲಾಗಿದೆ. ಅಂಟಾರ್ಟಿಕಾದ ಪೆನಿನ್ಸುಲಾದಲ್ಲಿ 2014ರಿಂದ 2021ರವರೆಗೆ ಪಡೆದ ಚಿತ್ರಗಳನುಸಾರ ಅಧ್ಯಯನ ನಡೆಸಲಾಗಿದೆ. ಇದರಲ್ಲಿ ಅಂಟಾರ್ಟಿಕಾದಲ್ಲಿ ಚಳಿ ಮತ್ತು ಬೇಸಿಗೆ ಕಾಲದಲ್ಲಿ ಹೇಗೆ ಹಿಮನದಿಗಳು ಕರಗುತ್ತಿವೆ ಎಂಬುದನ್ನು ವಿವರಿಸಲಾಗಿದೆ.
ಅಂಟಾರ್ಟಿಕಾದ ಪೆನಿನ್ಸುಲಾ ಅತಿ ಹೆಚ್ಚಿನ ಹಿಮನದಿಗಳನ್ನು ಹೊಂದಿದೆ. 1992 ಮತ್ತು 2017ರಲ್ಲಿ ಈ ಪ್ರದೇಶದಲ್ಲಿ ಹಿಮನದಿಗಳು ಕರಗಿದ ಪರಿಣಾಮ ಜಾಗತಿಕ ಸಮುದ್ರದ ನೀರಿನ ಮಟ್ಟದಲ್ಲಿ 7.6 ಮಿ.ಮಿ ಹೆಚ್ಚಳವಾಗಿದೆ. ಭವಿಷ್ಯದಲ್ಲಿ ಹವಾಮಾನ ಬದಲಾವಣೆಯಿಂದ ಇದು ಹೇಗೆ ಬದಲಾಗಬಹುದು ಎಂಬ ಅನಿಶ್ಚಿತತೆಯ ಮಾದರಿಯನ್ನು ಇದು ಹೊಂದಿದೆ.