ನವದೆಹಲಿ: 2032ರ ವೇಳೆಗೆ ಭಾರತದಲ್ಲಿ ಜನರೇಟಿವ್ ಎಐ(ಕೃತಕ ಬುದ್ಧಿಮತ್ತೆ) ತಂತ್ರಜ್ಞಾನವು ಅಕೌಂಟಿಂಗ್ ಕೆಲಸಗಳಿಗೆ ವ್ಯಯಿಸುವ ಶೇ 46ರಷ್ಟು ಸಮಯವನ್ನು ಉಳಿತಾಯ ಮಾಡಲಿದೆ ಎಂದು ಹೊಸ ವರದಿಯೊಂದು ಸೋಮವಾರ ತಿಳಿಸಿದೆ. ಕೆಲ ವೈಟ್-ಕಾಲರ್ ಕೆಲಸಗಳಾದ ಅಕೌಂಟೆಂಟ್ಗಳು, ಬುಕ್ ಕೀಪಿಂಗ್ ಗುಮಾಸ್ತರು, ವರ್ಡ್ ಪ್ರೊಸೆಸರ್ ಆಪರೇಟರ್ಗಳು, ಸೆಕ್ರೆಟರಿಗಳು, ಸ್ಟಾಲ್/ಮಾರುಕಟ್ಟೆ ಮಾರಾಟಗಾರರು ಮುಂತಾದವರ ಶೇ 30ರಷ್ಟು ಕೆಲಸವನ್ನು ಎಐ ಸ್ವಯಂ ಚಾಲಿತವಾಗಿ ಮಾಡಲಿದೆ ಎಂದು ವರದಿ ಹೇಳಿದೆ.
ಇದಕ್ಕೆ ಹೋಲಿಸಿದರೆ, ಬ್ಲೂ-ಕಾಲರ್ ಕೆಲಸಗಾರರು ಅಂದರೆ ನೇಕಾರರು, ಹೆಣಿಗೆದಾರರು, ಪರಿಚಾರಕರು, ಬೇಕರ್ಗಳು, ಅಡುಗೆಯವರು ಇತ್ಯಾದಿ ಕೆಲಸಗಾರರ ಒಂದು ವಾರದ ಕೆಲಸದಲ್ಲಿ ಶೇಕಡಾ 1 ಕ್ಕಿಂತ ಕಡಿಮೆ ಕೆಲಸವನ್ನು ಜನರೇಟಿವ್ ಎಐ ಮೂಲಕ ಮಾಡಬಹುದು ಎಂದು ಲರ್ನಿಂಗ್ ಕಂಪನಿ ಪಿಯರ್ಸನ್ ವರದಿ ತಿಳಿಸಿದೆ.
ಅನೇಕ ಆಡಳಿತಾತ್ಮಕ ಪಾತ್ರಗಳು ಪುನರಾವರ್ತಿತ ಕೆಲಸಗಳನ್ನು ಒಳಗೊಂಡಿರುತ್ತವೆ. ಉದಾಹರಣೆಗೆ ನೋಡುವುದಾದರೆ- ಅಪಾಯಿಂಟ್ಮೆಂಟ್ಗಳನ್ನು ನಿಗದಿಪಡಿಸುವುದು ಅಥವಾ ಕರೆಗಳಿಗೆ ಉತ್ತರಿಸುವುದು ಮತ್ತು ಬೇರೆಡೆ ಕರೆಯನ್ನು ವರ್ಗಾಯಿಸುವುದು. ಇಂಥ ಕೆಲಸಗಳನ್ನು ಜನರೇಟಿವ್ ಎಐನಿಂದ ಸುಲಭವಾಗಿ ಪುನರಾವರ್ತಿಸಬಹುದು.
ಭಾರತದಲ್ಲಿ, ಅಕೌಂಟಿಂಗ್ ಮತ್ತು ಬುಕ್ ಕೀಪಿಂಗ್ (46 ಪ್ರತಿಶತ), ವರ್ಡ್ ಪ್ರೊಸೆಸರ್ಗಳು ಮತ್ತು ಸಂಬಂಧಿತ ಆಪರೇಟರ್ಗಳ (40 ಪ್ರತಿಶತ) ಕೆಲಸದ ಮೇಲೆ ಜನರೇಟಿವ್ ಎಐ ಅತ್ಯಧಿಕ ಪರಿಣಾಮ ಬೀರಲಿದೆ.
ಹೀಗಾಗಿ ಉದ್ಯೋಗಿಗಳು ಭವಿಷ್ಯದಲ್ಲಿ ಯಾವ ವೃತ್ತಿಯನ್ನು ಆರಿಸಿಕೊಳ್ಳಬೇಕೆಂಬ ಪ್ರಶ್ನೆ ಬಂದಾಗ ಎಐನಿಂದ ಯಾವ ಉದ್ಯೋಗಗಳು ಅಪಾಯದಲ್ಲಿದೆ ಎಂಬುದನ್ನು ಮೊದಲು ತಿಳಿದುಕೊಂಡು ಆಮೇಲೆ ಮುಂದುವರಿಯುವುದು ಲೇಸು. ಇನ್ನು ಜನರೇಟಿವ್ ಎಐ ಯಾವೆಲ್ಲ ಹೊಸ ಉದ್ಯೋಗಗಳನ್ನು ಸೃಷ್ಟಿಸಬಹುದು ಎಂಬ ಬಗ್ಗೆ ಕೂಡ ಯುವಜನತೆ ತಿಳಿದುಕೊಳ್ಳಬೇಕಾಗುತ್ತದೆ.
ಭಾರತದಲ್ಲಿ ಸಾರಿಗೆ ಮತ್ತು ಸಂವಹನ, ಮಾರ್ಕೆಟಿಂಗ್, ನಿರ್ದೇಶಕರು ಮತ್ತು ಕಂಪನಿಗಳ ಕಾರ್ಯನಿರ್ವಾಹಕರು ಇವುಗಳ ಮೇಲೆ ಜನರೇಟಿವ್ ಎಐನ ಪರಿಣಾಮ ಅತ್ಯಂತ ಕಡಿಮೆಯಾಗಿರಲಿದೆ. ಇತ್ತೀಚಿನ ಪಿಯರ್ಸನ್ನ 'ಸ್ಕಿಲ್ಸ್ ಔಟ್ಲುಕ್' ಸರಣಿಯು ಆಸ್ಟ್ರೇಲಿಯಾ, ಬ್ರೆಜಿಲ್, ಭಾರತ, ಯುಎಸ್ ಮತ್ತು ಯುಕೆ - ಐದು ದೇಶಗಳಲ್ಲಿ 5,000 ಕ್ಕೂ ಹೆಚ್ಚು ಉದ್ಯೋಗಗಳ ಮೇಲೆ ಜನರೇಟಿವ್ ಎಐ ನಿಂದಾಗಬಹುದಾದ ಪರಿಣಾಮವಗಳನ್ನು ಅಧ್ಯಯನ ಮಾಡಿದೆ. ಕೃತಕ ಬುದ್ಧಿಮತ್ತೆ ಅಥವಾ ಎಐ ಎಂಬುದು ಮನುಷ್ಯನು ಮಾತ್ರ ಮಾಡಬಹುದಾದ ಸಂಕೀರ್ಣ ಕಾರ್ಯಗಳನ್ನು ನಿರ್ವಹಿಸುವ ಸಾಮರ್ಥ್ಯವಿರುವ ಕಂಪ್ಯೂಟರ್ ವ್ಯವಸ್ಥೆಗಳನ್ನು ಸೂಚಿಸುತ್ತದೆ.
ಇದನ್ನೂ ಓದಿ: ದೀರ್ಘಾವಧಿಯ ವೀಡಿಯೊ ಕಾನ್ಫರೆನ್ಸಿಂಗ್ನಿಂದ ಹೃದಯ, ಮೆದುಳಿಗೆ ಹಾನಿ: ವಿಜ್ಞಾನಿಗಳ ಎಚ್ಚರಿಕೆ