ಬೆಂಗಳೂರು: ಅಲ್ಫಾಬೆಟ್ನ ಗೂಗಲ್ ಜೆಮಿನಿ ಹೆಸರಿನ ಹೊಸ ಸಂಭಾಷಣಾತ್ಮಕ ಎಐ ಸಾಫ್ಟವೇರ್ ತಯಾರಿಸಿದ್ದು, ಸದ್ಯ ಇದನ್ನು ಪರೀಕ್ಷಿಸಲು ಆಯ್ದ ಕೆಲ ಕಂಪನಿಗಳಿಗೆ ಬಳಸಲು ನೀಡಲಾಗಿದೆ ಎಂದು ವರದಿಯಾಗಿದೆ. ಇದನ್ನು ಪ್ರಮುಖವಾಗಿ ಓಪನ್ಎಐ ನ ಚಾಟ್ ಜಿಪಿಟಿ -4 ಎಐ ಸಾಫ್ಟವೇರ್ಗೆ ಪೈಪೋಟಿ ನೀಡಲೆಂದೇ ತಯಾರಿಸಲಾಗಿದೆ. ಜನರೇಟಿವ್ ಎಐ ಸಾಫ್ಟವೇರ್ಗಳನ್ನು ತಯಾರಿಸಲು ಗೂಗಲ್ ಈ ವರ್ಷ ಗಣನೀಯ ಹೂಡಿಕೆ ಮಾಡಿದ್ದು, ಜೆಮಿನಿಯ ಬಿಡುಗಡೆ ಬಹಳ ಪ್ರಾಮುಖ್ಯತೆ ಪಡೆದಿದೆ.
ಕಳೆದ ವರ್ಷ ಲಾಂಚ್ ಆದಾಗ ಓಪನ್ ಎಐನ ಚಾಟ್ ಜಿಪಿಟಿ ಇಡೀ ವಿಶ್ವದ ಗಮನವನ್ನು ತನ್ನತ್ತ ಸೆಳೆದಿತ್ತು. ಈಗ ಅದೇ ಮಾದರಿಯಲ್ಲಿ ಗೂಗಲ್ ತನ್ನ ಹೊಸ ಜೆಮಿನಿ ಸಾಫ್ಟವೇರ್ ಅನ್ನು ಜಗತ್ತಿಗೆ ಪರಿಚಯಿಸಲು ನೋಡುತ್ತಿದೆ. ಜೆಮಿನಿ ಇದು ಚಾಟ್ಬಾಟ್ಗಳಿಂದ ಹಿಡಿದು ಮೂಲ ಪಠ್ಯವನ್ನು ಸಂಕ್ಷಿಪ್ತಗೊಳಿಸುವ ಅಥವಾ ಉತ್ಪಾದಿಸುವ ವೈಶಿಷ್ಟ್ಯಗಳವರೆಗೆ ವಿವಿಧ ಅಪ್ಲಿಕೇಶನ್ಗಳಿಗೆ ಕೆಲಸ ಮಾಡುವ ದೊಡ್ಡ ಭಾಷಾ ಮಾದರಿಗಳನ್ನು ಒಳಗೊಂಡಿದೆ.
ಇಮೇಲ್ಗಳನ್ನು ರಚಿಸುವುದರಿಂದ ಹಿಡಿದು ಸಂಗೀತ ಸಾಹಿತ್ಯ ಅಥವಾ ಸುದ್ದಿ ಲೇಖನಗಳನ್ನು ರಚಿಸುವ ಅಪ್ಲಿಕೇಶನ್ಗಳನ್ನು ಜೆಮಿನಿ ಹೊಂದಿರಲಿದೆ. ಇದಲ್ಲದೆ, ಜೆಮಿನಿ ಸಾಫ್ಟವೇರ್ ಎಂಜಿನಿಯರುಗಳಿಗೆ ಕೋಡ್ ಬರೆಯಲು ಮತ್ತು ಬಳಕೆದಾರರ ವಿನಂತಿಗಳ ಆಧಾರದ ಮೇಲೆ ಅನನ್ಯ ಚಿತ್ರಗಳನ್ನು ರಚಿಸಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಗೂಗಲ್ ತನ್ನ ಕ್ಲೌಡ್ ವರ್ಟೆಕ್ಸ್ ಎಐ ಸೇವೆಯ ಮೂಲಕ ಕಂಪನಿಗಳಿಗೆ ಜೆಮಿನಿಯನ್ನು ನೀಡಲು ಉದ್ದೇಶಿಸಿದೆ. ಆದರೆ ಈ ಬಗ್ಗೆ ಗೂಗಲ್ ಈವರೆಗೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.