ನವದೆಹಲಿ:ಚಂದ್ರಯಾನ, ಸೂರ್ಯಯಾನ ಯೋಜನೆಗಳ ಯಶಸ್ಸಿನ ಮೂಲಕ ನಭೋಮಂಡಲದಲ್ಲಿ ಇತಿಹಾಸ ನಿರ್ಮಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈಗ ಮತ್ತೊಂದು ಮಹತ್ವದ ಯೋಜನೆಗೆ ಸಜ್ಜಾಗುತ್ತಿದೆ. ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಮಾನವಸಹಿತ ಗಗನಯಾನ ಮಿಷನ್‌ನ ಮೊದಲ ಪರೀಕ್ಷಾರ್ಥ ಹಾರಾಟವನ್ನು ಅಕ್ಟೋಬರ್ 21 ರಂದು ನಡೆಸಲಿದೆ ಎಂದು ಸೋಮವಾರ ತಿಳಿಸಿತು.
ಟಿವಿ-ಡಿ1 ಪರೀಕ್ಷಾ ಹಾರಾಟವನ್ನು ಅಕ್ಟೋಬರ್ 21 ರಂದು ಶ್ರೀಹರಿಕೋಟಾದ ಎಸ್‌ಡಿಎಸ್‌ಸಿ-ಎಸ್ಎಚ್ಎಆರ್ನಿಂದ ಬೆಳಿಗ್ಗೆ 7 ರಿಂದ 9 ರವರೆಗೆ ನಿಗದಿಪಡಿಸಲಾಗಿದೆ. ಇದರಲ್ಲಿ ಮೂವರು ಗಗನಯಾತ್ರಿಗಳು ಹಾರಾಟ ನಡೆಸಲಿದ್ದಾರೆ ಎಂದು ಇಸ್ರೋ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ನೀಡಿದೆ.
2024 ರ ಅಂತ್ಯದ ವೇಳೆಗೆ ಮೂವರು ಗಗನಯಾತ್ರಿಗಳನ್ನು ಕಡಿಮೆ ಭೂಮಿಯ ಕಕ್ಷೆಗೆ ಸೇರಿಸುವ ಪ್ರಯತ್ನದ ಭಾಗವಾಗಿರು ಈ ಉಡಾವಣೆ ಮಹತ್ವದ್ದಾಗಿದೆ. ಪರೀಕ್ಷಾ ಹಾರಾಟವು ಕ್ಯಾಪ್ಸುಲ್ ಮಾಡ್ಯೂಲ್ನಲ್ಲಿನ ಒತ್ತಡವನ್ನು ತಗ್ಗಿಸುವ ವ್ಯವಸ್ಥೆಯ ಪರೀಕ್ಷೆ ನಡೆಸಲಾಗುವುದು ಎಂದು ಇಸ್ರೋ ತಿಳಿಸಿದೆ.
ಗಗನಯಾನ ಯೋಜನೆಯ ನಾಲ್ಕು ಪರೀಕ್ಷಾರ್ಥ ಪ್ರಯೋಗಗಳನ್ನು ನಡೆಸಲಾಗುವುದು ಎಂದು ಇಸ್ರೋ ಅಧ್ಯಕ್ಷ ಸೋಮನಾಥ್ ತಿಳಿಸಿದ್ದರು. ಅಕ್ಟೋಬರ್ 21 ರಂದು ಟಿವಿ-ಡಿ1ನ ಮೊದಲ ಹಾರಾಟ ಪ್ರಯೋಗ ನಡೆಯಲಿದೆ. ಇದಾದ ಬಳಿಕ ಟಿವಿ-ಡಿ2 , ಟಿವಿ-ಡಿ3 ಮತ್ತು ಟಿವಿ-ಡಿ4 ಇನ್ನೂ ಮೂರು ಪ್ರಯೋಗಗಳು ನಡೆಯಲಿವೆ.