ನವದೆಹಲಿ:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮಹತ್ವಾಕಾಂಕ್ಷಿ ಮಾನವಸಹಿತ ಗಗನಯಾನ ಯೋಜನೆಯ ಸಿಬ್ಬಂದಿ ರಕ್ಷಕ ವಾಹಕದ ಪ್ರಾಯೋಗಿಕ ಪರೀಕ್ಷೆಯ ಉಡಾವಣಾ ಸಮಯದಲ್ಲಿ ಅಲ್ಪ ಬದಲಾವಣೆ ಮಾಡಲಾಗಿದೆ. ಪರಿಷ್ಕೃತ ಅವಧಿಯಂತೆ ಅಕ್ಟೋಬರ್ 21 ರಂದು ಬೆಳಗ್ಗೆ 8 ಗಂಟೆಗೆ ಉಡಾವಣೆ ಮಾಡಲಾಗುತ್ತದೆ ಎಂದು ಇಸ್ರೋ ತಿಳಿಸಿದೆ. ಈ ಹಿಂದೆ ಬೆಳಿಗ್ಗೆ 7 ರಿಂದ 9 ನಡುವೆ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿತ್ತು.
ವೀಕ್ಷಣೆಗೆ ವೆಬ್‌ಸೈಟ್‌ನಲ್ಲಿ ನೋಂದಣಿ: ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಇಸ್ರೋ, ಗಗನಯಾನ ಮಿಷನ್ ಪ್ರಮುಖ ಭಾಗವಾದ ಫ್ಲೈಟ್ ಟೆಸ್ಟ್ ವೆಹಿಕಲ್ ಅಬಾರ್ಟ್ ಮಿಷನ್‌ನ ಪರೀಕ್ಷಾರ್ಥ ಪ್ರಯೋಗವನ್ನು ನವೀಕರಿಸಲಾಗಿದ್ದು, ಅಕ್ಟೋಬರ್ 21 ರಂದು ಬೆಳಿಗ್ಗೆ 8 ಗಂಟೆಗೆ ಶ್ರೀಹರಿಕೋಟಾದ ಬಾಹ್ಯಾಕಾಶ ನಿಲ್ದಾಣದಿಂದ ನಡೆಸಲಾಗುವುದು. ಈ ಹಿಂದಿನ ಸಮಯ 7 ರಿಂದ 9 ಆಗಿತ್ತು. ಇದು ಅಲ್ಪಾವಧಿಯ ಉಡಾವಣೆಯಾಗಿದೆ. ಉಡಾವಣಾ ವೀಕ್ಷಣಾ ಗ್ಯಾಲರಿಯಿಂದ ಜನರು ವೀಕ್ಷಣೆಗೆ ನೋಂದಣಿ ಮಾಡಿಕೊಳ್ಳಬಹುದು. ಕಡಿಮೆ ಜನರಿಗೆ ಅವಕಾಶ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದು ಇಸ್ರೋ ತಿಳಿಸಿದೆ. ಇಸ್ರೋದ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಶ್ರೀಹರಿಕೋಟಾದಿಂದ ಉಡಾವಣೆಯನ್ನು ವೀಕ್ಷಿಸಬಹುದು. ಅಕ್ಟೋಬರ್ 17 ಸಂಜೆ 6 ಗಂಟೆಗೆ ನೋಂದಣಿ ಆರಂಭವಾಗಲಿದೆ.
ಉಡಾವಣೆ ಕಾರ್ಯಾಚರಣೆ ಹೀಗಿರುತ್ತೆ:ಗಗನಯಾನ ನೌಕೆಯು 3 ದಿನಗಳ ಅವಧಿಯ ಉಡಾವಣೆಯಾಗಿದೆ. ಭೂಮಿಯಿಂದ 400 ಕಿ.ಮೀ ದೂರದ ಕಕ್ಷೆಗೆ ಸೇರಿಸಿ ಬಳಿಕ ಅದನ್ನು ಸಮುದ್ರದಲ್ಲಿ ಇಳಿಸಲಾಗುವುದು. ಸುರಕ್ಷಿತವಾಗಿ ಭೂಮಿಗೆ ವಾಪಸ್ ತರುವ ಮೂಲಕ ಮಾನವಸಹಿತ ಬಾಹ್ಯಾಕಾಶ ಹಾರಾಟದ ಸಾಮರ್ಥ್ಯವನ್ನು ಪರೀಕ್ಷೆ ನಡೆಸಲಾಗುತ್ತದೆ. ಈ ಯೋಜನೆ ಯಶಸ್ವಿಯಾದಲ್ಲಿ ಅಮೆರಿಕ, ರಷ್ಯಾ ಮತ್ತು ಚೀನಾದ ನಂತರ ಮಾನವಸಹಿತ ಬಾಹ್ಯಾಕಾಶ ಯಾನವನ್ನು ನಡೆಸಿದ ನಾಲ್ಕನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಲಿದೆ.