ಸಿಯೋಲ್ :ಎಲೆಕ್ಟ್ರಾನಿಕ್ ಉಪಕರಣಗಳ ದೈತ್ಯ ಕಂಪನಿ ಎಲ್ಜಿ ಇದೀಗ ಟಿವಿ ಜಗತ್ತಿಗೆ ಹೊಸದೊಂದು ಅನ್ವೇಷಣೆ ಮೂಲಕ ಲಗ್ಗೆ ಇಟ್ಟಿದೆ. ದೂರದರ್ಶನ ವಲಯದಲ್ಲಿ ಹೊಸ ಹೊಸ ತಂತ್ರಜ್ಞಾನಗಳು ಆವರಿಸಿಕೊಳ್ಳುತ್ತಿದ್ದು, ಇದೀಗ ಎಲ್ಜಿ ಕಂಪನಿಯ ರೋಲಿಂಗ್ ಟಿವಿ ಇದಕ್ಕೆ ಸೇರ್ಪಡೆಗೊಂಡಿದೆ.
ಸೌತ್ ಕೊರಿಯಾ ಮೂಲದ ಎಲ್ಜಿ ಕಂಪನಿ ಹೊರತಂದಿರುವ ವಿಶ್ವದ ಮೊದಲ ರೋಲಿಂಗ್ ಟಿವಿ ಇದಾಗಿದ್ದು, ಇದರ ಬೆಲೆ ಸುಮಾರು 64 ಲಕ್ಷ ರೂ. ಆಗಿರಲಿದೆ. ಈಗಾಗಲೇ ಕೊರಿಯಾದಲ್ಲಿ ಖರೀದಿಗೆ ಲಭ್ಯವಾಗಿದೆ. ಈಟಿವಿಗೆ ಎಲ್ಜಿ ಸಿಗ್ನೇಚರ್ ಒಎಲ್ಇಡಿ ಆರ್ ಎಂದು ಸಂಸ್ಥೆ ಕರೆದಿದ್ದು, ಟಿವಿಯನ್ನು ಆಫ್ ಮಾಡಿದಾಗ ಪರದೆ ಕೆಳಗಿಳಿಯುತ್ತದೆ. ಇದರಿಂದ ಟಿವಿ ಇರುವ ಸ್ಥಳ ಖಾಲಿಯಾಗಿರುತ್ತದೆ.
ಟಿವಿಯು ಅಲ್ಯೂಮಿನಿಯಂ ಕವಚ ಹಾಗೂ ಡೆನ್ಮಾರ್ಕ್ನ ಮೃಧುವಾದ ಕ್ವಾಡ್ರಾಟ್ (ಉಣ್ಣೆಯಿಂದ ತಯಾರಾದ ಬಟ್ಟೆ)ಯಿಂದ ಮಾಡಲ್ಪಟ್ಟ ಸ್ಪೀಕರ್ ಹೊಂದಿದೆ.
ಲಿಕ್ವಿಡ್ ಸ್ಮೂತ್ ಟೆಕ್ನಾಲಜಿಯ 65 ಇಂಚಿನ ಒಎಲ್ಇಡಿ ಪರದೆ ಇದರಲ್ಲಿದ್ದು, ಸ್ವಯಂಚಾಲಿತವಾಗಿ ಬೆಳಕನ್ನು ಗ್ರಹಿಸಿ ಚಿತ್ರ ಗುಣಮಟ್ಟವನ್ನು ವೃದ್ಧಿಸುವ ಹಾಗೂ ಹೆಚ್ಚು ಬೆಳಕು ಹೊಂದಿರುವ ಚಿತ್ರಗಳ ಮುಬ್ಬಾಗಿಸುವ ಸ್ವನಿಯಂತ್ರಣ ತಂತ್ರಜ್ಞಾನ ಹೊಂದಿದೆ. ಅಲ್ಲದೆ ಪರದೆಯನ್ನು ಸಂಪೂರ್ಣ ಮರೆಮಾಚಿ, ಬ್ಲೂಟೂತ್ ಸ್ಪೀಕರ್ ಆಗಿಯೂ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ.
ಈ ಟಿವಿಯ ಹೆಸರಲ್ಲಿರುವ ಆರ್ ಎಂಬ ಅಕ್ಷರವು ರೋಲೇಬಲ್ ಎಂಬುದು ಮಾತ್ರವಲ್ಲದೆ. ರೆವ್ಯೂಲ್ಯೂಷನರಿ ಎಂಬ ಸಂದೇಶ ಹೊಂದಿದೆ ಎಂದು ಸಂಸ್ಥೆ ತಿಳಿಸಿದೆ. ಈ ಟಿವಿಯ ಪರದೆಯ ಕೆಳಭಾಗದಲ್ಲಿ ಗುಂಡಿಯಾಕಾರದ ವರ್ಚುಯಲ್ ಬಟನ್ ಹೊಂದಿದ್ದು, ಅತ್ಯಂತ ತೆಳುವಾದ ಪರದೆ ಇದಾಗಿರಲಿದೆ.
ಈ ಟಿವಿಯು ಮೊದಲ ಬಾರಿಗೆ ಕಳೆದ ವರ್ಷ ಅಮೆರಿಕಾದಲ್ಲಿ ನಡೆದ ಎಲೆಕ್ಟ್ರಾನಿಕ್ಸ್ ವಸ್ತು ಪ್ರದರ್ಶನದಲ್ಲಿ ಗ್ರಾಹಕರು ಕಣ್ತುಂಬಿಕೊಂಡಿದ್ದರು. ಸಂಸ್ಥೆ ಈ ಟಿವಿಯನ್ನು 2019ರಲ್ಲಿಯೇ ಅಧಿಕ ಸಂಖ್ಯೆಯಲ್ಲಿ ಹೊರತರುವ ಯೋಜನೆ ಹಾಕಿಕೊಂಡಿತ್ತು. ಆದರೆ, ಒಎಲ್ಇಡಿ ಸ್ಕ್ರೀನ್ಗಳ ಲಭ್ಯತೆಯಲ್ಲಿ ಕೊರತೆಯುಂಟಾದ ಹಿನ್ನೆಲೆ ಉತ್ಪಾದನೆ ಸಹ ನಿಧಾನಗತಿಯಲ್ಲಿ ಸಾಗಿತ್ತು.