ಸಿಯೋಲ್ : ಹಾನಿಗೀಡಾಗಿರುವ ಫುಕುಶಿಮಾ ಪರಮಾಣು ವಿದ್ಯುತ್ ಸ್ಥಾವರದಿಂದ ವಿಕಿರಣಶೀಲ ನೀರನ್ನು ಸಮುದ್ರಕ್ಕೆ ಬಿಡುಗಡೆ ಮಾಡಲು ಜಪಾನ್ ಯೋಜಿಸಿದೆ. ಆದರೆ ಇದಕ್ಕೂ ಮುನ್ನ ನೀರಿನ ವಿಕಿರಣಶೀಲತೆಯನ್ನು ಪರಿಶೀಲಿಸಲು ದಕ್ಷಿಣ ಕೊರಿಯಾದ ತಜ್ಞರ 21 ಸದಸ್ಯರ ತಂಡವು ಜಪಾನ್‌ಗೆ ಆರು ದಿನಗಳ ಭೇಟಿಯನ್ನು ಕೈಗೊಳ್ಳಲಿದೆ ಎಂದು ಸರ್ಕಾರ ಶುಕ್ರವಾರ ತಿಳಿಸಿದೆ. ದೇಶದ ಪರಮಾಣು ಸುರಕ್ಷತಾ ಆಯೋಗದ ಮುಖ್ಯಸ್ಥರ ನೇತೃತ್ವದ ನಿಯೋಗವು ನೀರು ಬಿಡುಗಡೆಯ ಸಂಪೂರ್ಣ ಪ್ರಕ್ರಿಯೆಯ ಸುರಕ್ಷತೆಯನ್ನು ಪರಿಶೀಲಿಸಲಿದೆ ಮತ್ತು ವಿಕಿರಣಶೀಲ ವಸ್ತುಗಳನ್ನು ವಿಶ್ಲೇಷಿಸುವಲ್ಲಿ ಜಪಾನ್‌ನ ಸಾಮರ್ಥ್ಯವನ್ನು ಒರೆಗೆ ಹಚ್ಚಲಿದೆ ಎಂದು ಸರ್ಕಾರಿ ನೀತಿ ಸಮನ್ವಯ ಕಚೇರಿ (OPC) ಹೇಳಿದೆ.
ಈ ತಿಂಗಳ ಆರಂಭದಲ್ಲಿ ಸಿಯೋಲ್‌ನಲ್ಲಿ ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯೋಲ್ ಮತ್ತು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ಕೊರಿಯಾ ತಜ್ಞರು ಜಪಾನ್‌ಗೆ ಭೇಟಿ ನೀಡುವ ವಿಷಯವನ್ನು ತಾತ್ವಿಕವಾಗಿ ಒಪ್ಪಲಾಯಿಗಿತ್ತು ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಕಲುಷಿತ ನೀರಿನ ಬಿಡುಗಡೆಯಿಂದ ಆರೋಗ್ಯ ಮತ್ತು ಪರಿಸರದ ಮೇಲೆ ಉಂಟಾಗಬಹುದಾದ ಅಪಾಯಕಾರಿ ಪರಿಣಾಮಗಳ ಬಗ್ಗೆ ದಕ್ಷಿಣ ಕೊರಿಯನ್ನರು ಕಳವಳ ವ್ಯಕ್ತಪಡಿಸಿದ್ದಾರೆ.
ಉಭಯ ದೇಶಗಳ ರಾಜತಾಂತ್ರಿಕರು ಭೇಟಿಯ ವಿವರಗಳನ್ನು ಸಿದ್ಧಪಡಿಸಿದ್ದಾರೆ. OPC ಪ್ರಕಾರ ಪರಮಾಣು ರಿಯಾಕ್ಟರ್ ಮತ್ತು ವಿಕಿರಣ ವಲಯಗಳಲ್ಲಿ ಇತರ 19 ತಜ್ಞರು ಮತ್ತು ಸಮುದ್ರ ಪರಿಸರದಲ್ಲಿ ವಿಕಿರಣದ ತಜ್ಞರ ಜೊತೆಯಲ್ಲಿ ಪರಮಾಣು ಸುರಕ್ಷತೆ ಮತ್ತು ಭದ್ರತಾ ಆಯೋಗದ ಅಧ್ಯಕ್ಷ ಯೂ ಗುಕ್ ಹೀ ತಂಡವನ್ನು ಮುನ್ನಡೆಸುತ್ತಾರೆ. ಭೇಟಿಯ ಸಮಯದಲ್ಲಿ, ಪರಿಶೀಲನಾ ತಂಡವು ಮೊದಲು ಸ್ಥಾವರದ ನಿರ್ವಾಹಕರಾದ ಟೋಕಿಯೊ ಎಲೆಕ್ಟ್ರಿಕ್ ಪವರ್ ಕಂ ಅಧಿಕಾರಿಗಳನ್ನು ಭೇಟಿ ಮಾಡಿ ಒಟ್ಟಾರೆ ಪರಿಸ್ಥಿತಿಯನ್ನು ವಿವರವಾಗಿ ಚರ್ಚಿಸಲಿದೆ.