ಮೊಬೈಲ್ ತಂತ್ರಜ್ಞಾನ ಇಂದು ವಿಪರೀತವಾಗಿ ಬೆಳೆದುನಿಂತಿದೆ. ಕ್ಷಣಮಾತ್ರದಲ್ಲಿ ನಾವು ಏನನ್ನು ಬೇಕಾದರೂ ಮೊಬೈಲ್ ಮೂಲಕ ಸಾಧಿಸಬಹುದಾಗಿದೆ. ವಾಟ್ಸ್ಆ್ಯಪ್ ಬಂದ ಮೇಲಂತೂ ಸಂದೇಶ ರವಾನೆ ಇನ್ನೂ ಸುಲಭವಾಗಿದೆ. ವಿಶ್ವದಲ್ಲಿ ಮೊದಲ ಬಾರಿಗೆ ಯಾರು ಯಾರಿಗೆ ಮೆಸೆಜ್ ಮಾಡಿದರು ಎಂಬುದು ಕುತೂಹಲಕಾರಿ ಅಂಶ. ಅಂದಹಾಗೆ ವಿಶ್ವದ ಮೊದಲ ಸಂದೇಶ ರವಾನೆಯಾಗಿ ಡಿಸೆಂಬರ್ 3 ಕ್ಕೆ 30 ವರ್ಷ ಸಂದಿವೆ.
ವಿಶ್ವದ ಮೊದಲ ಮೆಸೆಜ್ ಏನಾಗಿತ್ತು ಗೊತ್ತಾ?:30 ವರ್ಷಗಳ ಹಿಂದೆ ಅಂದರೆ ಯುನೈಟೆಡ್ ಕಿಂಗ್‌ಡಮ್‌ನ ಬರ್ಕ್‌ಷೈರ್‌ನಲ್ಲಿ 1992 ರ ಡಿಸೆಂಬರ್ 3 ರಂದು ಮೊದಲ ಬಾರಿಗೆ ಎಸ್ಎಂಎಸ್(ಶಾರ್ಟ್ ಮೆಸೆಜ್ ಸರ್ವೀಸ್) ಒಂದು ಇನ್ನೊಬ್ಬರಿಗೆ ತಲುಪಿತ್ತು. ಇದನ್ನು ವೊಡಾಫೋನ್ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ನೀಲ್ ಪಾಪ್‌ವರ್ಥ್ ಅವರು, ಸಂಸ್ಥೆಯ ಮುಖ್ಯಸ್ಥರಲ್ಲಿ ಒಬ್ಬರಾದ ರಿಚರ್ಡ್ ಜಾರ್ವಿಸ್ಗೆ "ಮೆರ್ರಿ ಕ್ರಿಸ್‌ಮಸ್" ಎಂದು ಬರೆದ ಸಂದೇಶವನ್ನು ರವಾನಿಸಿದ್ದರು.
ಜಾರ್ವಿಸ್ ಕ್ರಿಸ್‌ಮಸ್ ಪಾರ್ಟಿಯಲ್ಲಿದ್ದ ಕಾರಣ, ಪಾಪ್ವರ್ಥ್ಗೆ ಮರು ಉತ್ತರ ನೀಡಿರಲಿಲ್ಲ. ಮೆಸೆಜ್ ರವಾನಿಸುವ ತಂತ್ರಜ್ಞಾನವನ್ನು ಪರೀಕ್ಷಿಸಲು ಪಾಪ್‌ವರ್ಥ್ ಈ ಎಸ್ಎಂಎಸ್ ಮಾಡಿದ್ದರು. ಇದೇ ವಿಶ್ವದ ಮೊದಲ ಮೆಸೆಜ್ ಆಗಿ ದಾಖಲಾಗಿದೆ.