ಟ್ವಿಟರ್ ಅನ್ನು ಜಗತ್ತಿನ ನಂ. 1 ಶ್ರೀಮಂತ ಎಲಾನ್ ಮಸ್ಕ್ ಅವರು ಖರೀದಿಸಿ ನಂತರ ಅದರ ಮೌಲ್ಯ ಅರ್ಧದಷ್ಟು ಕುಸಿದಿದೆ ಎನ್ನುವ ವರದಿ ಬಂದ ಬೆನ್ನಲ್ಲೇ, ಇದೀಗ ಎಲಾನ್ ಮಸ್ಕ್ ಏಕಾಂಗಿ ಆಗಿರುವವರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಶೀಘ್ರದಲ್ಲೇ ಎಲಾನ್ ಮಸ್ಕ್ ಎಕ್ಸ್ ಅನ್ನು ಉನ್ನತ ಡೇಟಿಂಗ್ ಹಾಗೂ ಉದ್ಯೋಗ ನೇಮಕಾತಿ ವೇದಿಕೆಯನ್ನಾಗಿ ಮಾಡುವ ಉದ್ದೇಶ ಹೊಂದಿದ್ದಾರೆ. ಹೊಸ ಪೋಚರ್ ಪರಿಚಯಿಸಲು ಮುಂದಾಗಿದ್ದಾರೆ.
ಎಕ್ಸ್ (ಮಾಜಿ ಟ್ವಿಟರ್) ಅನ್ನು ಎಲಾನ್ ಮಸ್ಕ್ ಖರೀದಿಸಿದ ಬಳಿಕ ಮೊದಲ ವಾರ್ಷಿಕೋತ್ಸವ ಆಚರಿಸುತ್ತಿರುವ ಹೊತ್ತಲ್ಲಿ, ಇತ್ತೀಚೆಗೆ ಎಲಾನ್ ಮಸ್ಕ್ ಹಾಗೂ ಎಕ್ಸ್ ಸಿಇಒ ಲಿಂಡಾ ಯಾಕರಿನೊ ಅವರು ತಮ್ಮ ಉದ್ಯೋಗಿಗಳೊಂದಿಗೆ ಆಯೋಜಿಸಿದ್ದ ಸಭೆಯೊಂದರಲ್ಲಿ ಎಕ್ಸ್ಗೆ ಡೇಟಿಂಗ್ ಆ್ಯಪ್ ಫೀಚರ್ಗಳನ್ನು ಸೇರಿಸುವ ಯೋಜನೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಬಳಕೆದಾರರಿಗೆ ಅವರ ಎಲ್ಲಾ ಅಗತ್ಯಗಳಿಗೆ ಸಮಗ್ರ ಪರಿಹಾರ ಒದಗಿಸಲು ಎಕ್ಸ್, ಯೂಟ್ಯೂಬ್, ಲಿಂಕ್ಡ್ಇನ್, ಫೇಸ್ಟೈಮ್ ಹಾಗೂ ಬ್ಯಾಂಕಿಂಗ್ ಅಪ್ಲಿಕೇಶನ್ಗಳಂತಹ ವಿವಿಧ ಆನ್ಲೈನ್ ಆ್ಯಪ್ಗಳ ಜೊತೆಗೆ ಸ್ಪರ್ಧಿಸಬೇಕಿದೆ. ಹಾಗಾಗಿ ಮೈಕ್ರೋಬ್ಲಾಗಿಂಗ್ ತಾಣವಾಗಿರುವ ಎಕ್ಸ್ಅನ್ನು ಇನ್ಮುಂದೆ ಎಲ್ಲಾ ಒಳಗೊಂಡ ಎವ್ರಿಥಿಂಗ್ ಅಪ್ಲಿಕೇಶನ್ (Everything Application) ಆಗಿ ಪರಿವರ್ತಿಸಲು ಚಿಂತನೆ ನಡೆಸಿರುವುದಾಗಿ ಹೇಳಿದ್ದಾರೆ.
ಅದರಲ್ಲೂ ಮಸ್ಕ್ ಅವರು ಎಕ್ಸ್ ಗೆ ಡೇಟಿಂಗ್ ಅಪ್ಲಿಕೇಶನ್ ತರಹದ ಫೀಚರ್ಗಳನ್ನು ಪರಿಚಯಿಸವ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ. ಈ ವೇದಿಕೆ ಬಳಕೆದಾರರು ತಮ್ಮ ಪ್ರೀತಿಯನ್ನು ಹುಡುಕಿಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ಬಗ್ಗೆ ಮಸ್ಕ್ ದೃಷ್ಟಿಕೋನ ಸ್ಪಷ್ಟವಾಗಿದ್ದು, ಎಕ್ಸ್ನಲ್ಲಿ ಪೋಸ್ಟ್ ಮಾಡುವ ವಿಷಯಗಳು ವೃತ್ತಿಪರ ಸಂಪರ್ಕಗಳಿಗೆ ಮಾತ್ರವಲ್ಲದೆ, ಪ್ರೀತಿಯ ಕೊಂಡಿಯನ್ನೂ ಬೆಸೆಯುವಂತಾಗಬೇಕು ಎನ್ನುವ ನಿರ್ಧಾರವನ್ನು ಮಸ್ಕ್ ಮಾಡಿದ್ದಾರೆ.