ನವದೆಹಲಿ: ಪರವಾನಗಿ ಇಲ್ಲದೇ ವಿದೇಶಗಳಿಂದ ಲ್ಯಾಪ್ಟಾಪ್, ಪರ್ಸನಲ್ ಕಂಪ್ಯೂಟರ್ ಸೇರಿದಂತೆ ಟ್ಯಾಬ್ಲೆಟ್ಗಳ ಆಮದು ಮಾಡಿಕೊಳ್ಳುವುದಕ್ಕೆ ಕೇಂದ್ರ ಸರ್ಕಾರ ನಿರ್ಬಂಧ ವಿಧಿಸಿದೆ. ಕೇಂದ್ರ ಸರ್ಕಾರದ ಈ ದಿಢೀರ್ ನಿರ್ಧಾರದಿಂದ ಅನೇಕ ಕಂಪನಿಗಳು ಪೇಚಿಗೆ ಸಿಲುಕಿದವು. ಆದರೆ, ಇದೀಗ ಕೊಂಚ ವಿನಾಯಿತಿ ನೀಡಿರುವ ಸರ್ಕಾರ ಪರವಾನಗಿ ಇಲ್ಲದ ಕಂಪ್ಯೂಟರ್, ಲ್ಯಾಪ್ಟಾಪ್ ಆಮದು ಮಾಡಿಕೊಳ್ಳಲು ಅಕ್ಟೋಬರ್ 31ರವರೆಗೆ ಕಾಲಾವಕಾಶ ನೀಡಿದೆ.
ಇದೀಗ ಈ ಕಂಪನಿಗಳು ಕೇಂದ್ರ ಸರ್ಕಾರದಿಂದ ನವೆಂಬರ್ 1ರಿಂದ ಪರವಾನಗಿ ಪಡೆಯುವುದು ಅವಶ್ಯಕವಾಗಿದೆ. ಆಗಸ್ಟ್ 3ರಂದು ಸರ್ಕಾರ ತತ್ಕ್ಷಣದಿಂದ ಜಾರಿಗೆ ಬರುವಂತೆ ಕಂಪ್ಯೂಟರ್, ಲ್ಯಾಪ್ಟಾಪ್ ಆಮದಿಗೆ ಪರವಾನಗಿ ನಿರ್ಬಂಧವನ್ನು ವಿಧಿಸಿತು. ಈ ರೀತಿ ಏಕಾಏಕಿ ನಿರ್ಬಂಧ ಹೇರಿದ ಕ್ರಮದ ವಿರುದ್ದ ಆಕ್ಷೇಪ ವ್ಯಕ್ತಪಡಿಸಿದ ಉದ್ಯಮಗಳು, ಈ ಬಗ್ಗೆ ನಮಗೆ ಮುನ್ಸೂಚನೆ ನೀಡದೇ ಈ ರೀತಿ ಕ್ರಮ ನಡೆಸಿರುವುದು ಸಮಸ್ಯೆಯಾಗಿದೆ ಎಂದು ಮನವಿ ಮಾಡಿವೆ.
ಡಿಜಿಎಫ್ಟಿಯಿಂದ ಪರಿಷ್ಕೃತ ಅಧಿಸೂಚನೆ: ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ (ಡಿಜಿಎಫ್ಟಿ) ಶುಕ್ರವಾರ ಕೇಂದ್ರ ಸರ್ಕಾರದ ಈ ನಿರ್ಬಂಧವು ನವೆಂಬರ್ 1ರಿಂದ ಜಾರಿಗೆ ಬರಲಿದೆ ಎಂದು ಅಧಿಸೂಚನೆ ಹೊರಡಿಸಿದೆ. ಪರವಾನಗಿ ಇಲ್ಲದ ಉಪಕರಣಗಳನ್ನು ಅಕ್ಟೋಬರ್ 31ರೊಳಗೆ ಆಮದು ಮಾಡಿಕೊಳ್ಳಬಹುದಾಗಿದ್ದು, ನವೆಂಬರ್ 1ರಿಂದ ಆಮದು ಮಾಡಿಕೊಳ್ಳಬೇಕು ಎಂದರೆ ಪರವಾನಗಿ ಅತ್ಯವಶ್ಯಕವಾಗಿದೆ ಎಂದಿದೆ.
ಇದರ ಜೊತೆಗೆ ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು, ಆಲ್ ಇನ್ ಒನ್ ಪರ್ಸನಲ್ ಕಂಪ್ಯೂಟರ್‌ಗಳು, ಅಲ್ಟ್ರಾ-ಸ್ಮಾಲ್ ಫಾರ್ಮ್ ಫ್ಯಾಕ್ಟರ್ ಕಂಪ್ಯೂಟರ್‌ಗಳು ಮತ್ತು ಸರ್ವರ್‌ಗಳ ಆಮದುಗಳಿಗೆ ಈ ಉದಾರ ನೀತಿಯನ್ನು ಅಕ್ಟೋಬರ್ 31, 2023ರವರೆಗೆ ವಿಸ್ತರಿಸಲಾಗಿದೆ ಎಂದಿದೆ.
ಕೇಂದ್ರ ಸರ್ಕಾರದ ಈ ವಿನಾಯಿತಿಯೂ ಇದೀಗ ಅನೇಕ ಕಂಪನಿಗಳಿಗೆ ಕೊಂಚ ಉಸಿರು ಬಿಡುವಂತೆ ಆಗಿದೆ.