ಮುಂಬೈ: ಆ್ಯಪಲ್ ಭಾರತದಲ್ಲಿ ತನ್ನ 25 ವರ್ಷಗಳ ಇತಿಹಾಸವನ್ನು ಮುಂದುವರಿಸಲು ಉತ್ಸುಕವಾಗಿದೆ ಎಂದು ಆ್ಯಪಲ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿಮ್ ಕುಕ್ ಹೇಳಿದರು. ನಾಳೆ ಮುಂಬೈನಲ್ಲಿ ದೇಶದ ಪ್ರಥಮ ಆ್ಯಪಲ್ ಮಾಲೀಕತ್ವದ ಮಳಿಗೆ ಆರಂಭಕ್ಕೂ ಮುನ್ನ ಕುಕ್ ಹೇಳಿಕೆ ಮಹತ್ವ ಪಡೆದಿದೆ. ಭಾರತವು ಸುಂದರವಾದ ಸಂಸ್ಕೃತಿ ಮತ್ತು ಅದ್ಭುತವಾದ ಶಕ್ತಿಯನ್ನು ಹೊಂದಿದೆ. ನಮ್ಮ ಗ್ರಾಹಕರನ್ನು ಬೆಂಬಲಿಸಲು, ಸ್ಥಳೀಯ ಸಮುದಾಯಗಳಲ್ಲಿ ಹೂಡಿಕೆ ಮಾಡಲು ಮತ್ತು ಮಾನವೀಯತೆಗೆ ಸೇವೆ ಸಲ್ಲಿಸುವ ಹೊಸತನಗಳೊಂದಿಗೆ ಉತ್ತಮ ಭವಿಷ್ಯ ನಿರ್ಮಿಸಲು ಒಟ್ಟಾಗಿ ಕೆಲಸ ಮಾಡುವುದಕ್ಕಾಗಿ ಭಾರತದೊಂದಿಗಿನ ನಮ್ಮ ದೀರ್ಘಕಾಲದ ಇತಿಹಾಸವನ್ನು ಮುಂದುವರಿಸಲು ಉತ್ಸುಕರಾಗಿದ್ದೇವೆ ಎಂದು ಕುಕ್ ಹೇಳಿದರು.
ಆ್ಯಪಲ್ ತನ್ನ ಬಹು ನಿರೀಕ್ಷಿತ ರಿಟೇಲ್ ಸ್ಟೋರ್ ಆ್ಯಪಲ್ ಬಿಕೆಸಿ (Apple BKC) ಅನ್ನು ಏಪ್ರಿಲ್ 18 ರಂದು ಮುಂಬೈನಲ್ಲಿ ತೆರೆಯಲು ಸಜ್ಜಾಗಿದೆ. ಇದು ದೇಶದಲ್ಲಿ ಆ್ಯಪಲ್ ತನ್ನ ಕಾರ್ಯಾಚರಣೆಗಳನ್ನು ಗಮನಾರ್ಹವಾಗಿ ವಿಸ್ತರಿಸುತ್ತಿರುವ ಸಂಕೇತವಾಗಿದೆ. ಕಂಪನಿಯ ಭವಿಷ್ಯದ ಬೆಳವಣಿಗೆಗೆ ಇದು ಮಹತ್ವದ ಹೆಜ್ಜೆಯಾಗಿದೆ. ಏಪ್ರಿಲ್ 20 ರಂದು ದೆಹಲಿಯಲ್ಲಿ ಎರಡನೇ ರಿಟೇಲ್ ಸ್ಟೋರ್ ಅನ್ನು ಆ್ಯಪಲ್ ಆರಂಭಿಸುತ್ತಿದೆ. ಈ ಮಳಿಗೆಗೆ ಆ್ಯಪಲ್ ಸಾಕೇತ್ (Apple Saket) ಎಂದು ಹೆಸರಿಡಲಾಗಿದೆ.
ಈ ರಿಟೇಲ್ ಸ್ಟೋರ್ಗಳು ದೇಶದಲ್ಲಿ ಆ್ಯಪಲ್‌ನ ಬೆಳೆಯುತ್ತಿರುವ ಮಹತ್ವಾಕಾಂಕ್ಷೆಗಳ ಗುರುತಾಗಿವೆ. ಇದು ಭಾರತವು ಮಾರಾಟ ಮತ್ತು ಉತ್ಪಾದನಾ ಸಾಮರ್ಥ್ಯಗಳ ವಿಷಯದಲ್ಲಿ ಪ್ರಮುಖ ಮಾರುಕಟ್ಟೆಯಾಗಿ ಹೊರಹೊಮ್ಮುತ್ತಿರುವುದರ ಸೂಚಕವಾಗಿದೆ. ಇನ್ನು ಹೆಚ್ಚೆಚ್ಚು ಭಾರತೀಯ ಗ್ರಾಹಕರು ಪ್ರೀಮಿಯಂ ಉತ್ಪನ್ನಗಳನ್ನು ಕೊಳ್ಳಲು ಮುಂದಾಗುತ್ತಿದ್ದಾರೆ. ಭಾರತದಲ್ಲಿ ಆ್ಯಪಲ್‌ನ ಐಫೋನ್ಗಳ ಮಾರಾಟದಲ್ಲಿ ಗಮನಾರ್ಹ ಏರಿಕೆಯಾಗಿದ್ದು, ಇದರಿಂದ ಕಂಪನಿಗೆ ದೊಡ್ಡ ಪ್ರಮಾಣದ ಆದಾಯ ಹರಿದು ಬರುತ್ತಿದೆ. ಐಫೋನ್ಗಳ ಮಾರಾಟ ಪ್ರತಿ ತ್ರೈಮಾಸಿಕದಲ್ಲಿ ಎರಡಂಕಿಯ ಬೆಳವಣಿಗೆ ದಾಖಲಿಸುತ್ತಿದೆ.