ಪ್ಯಾರೀಸ್ (ಫ್ರಾನ್ಸ್):ಯೂರೋಪಿಯನ್ ಸ್ಪೇಸ್ ಏಜೆನ್ಸಿ 11 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಬಾಹ್ಯಾಕಾಶ ಯಾತ್ರಿಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದೆ ಎಂದು ಏಜೆನ್ಸಿಯ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.
'ನಾವು ಚಂದ್ರ ಮತ್ತು ಮಂಗಳನೆಡೆಗೆ ನೋಡುತ್ತಿದ್ದೇವೆ. ಭವಿಷ್ಯದಲ್ಲಿ ನಮಗೆ ಪರಿಣತ ಬಾಹ್ಯಾಕಾಶ ಯಾತ್ರಿಗಳ ಅವಶ್ಯಕತೆಯದೆ' ಎಂದು ಯೂರೋಪಿಯನ್ ಸ್ಪೇಸ್ ಏಜೆನ್ಸಿಯ ಮಹಾನಿರ್ದೇಶಕ ಜಾನ್ ವೂರ್ನರ್ ಹೇಳಿದ್ದಾರೆ. ’’ನಾವು ವಿಶಾಲವಾಗಿ ನೋಡಬೇಕಾಗಿದೆ. ಈ ಮೊದಲಿಗಿಂತಲೂ ವಿಶಾಲವಾಗಿ ನೋಡಬೇಕಾಗಿದೆ’’ ಎಂದು ಜಾನ್ ವೂರ್ನರ್ ಅಭಿಪ್ರಾಯಪಟ್ಟಿದ್ದಾರೆ.
ಈವರೆಗೆ 560 ಮಂದಿ ಬಾಹ್ಯಾಕಾಶ ಯಾನ ಕೈಗೊಂಡಿದ್ದು, ಅವರಲ್ಲಿ 65 ಮಂದಿ ಮಹಿಳೆಯರಾಗಿದ್ದಾರೆ. ಆ ಮಹಿಳೆಯರಲ್ಲಿ 51 ಮಂದಿ ಅಮೆರಿಕನ್ನರಾಗಿದ್ದಾರೆ. ಯೂರೋಪಿಯನ್ ಸ್ಪೇಸ್ ಏಜೆನ್ಸಿ ಈವರೆಗೆ ಕೇವಲ ಇಬ್ಬರು ಮಹಿಳೆಯರನ್ನು ಅಂತರಿಕ್ಷಕ್ಕೆ ಕಳುಹಿಸಿದೆ. ಈಗ ಮಹಿಳಾ ಗಗನಯಾತ್ರಿಗಳ ಕೊರತೆ ತುಂಬಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.