ಪ್ಯಾರಿಸ್(ಫ್ರಾನ್ಸ್):ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ಇಎಸ್‌ಎ) ಮತ್ತು ನಾಸಾದ ಸೋಲಾರ್ ಆರ್ಬಿಟರ್ ಮಿಷನ್ ಸೂರ್ಯನ ಚಿತ್ರಗಳನ್ನು ಅದ್ಭುತವಾಗಿ ಸೆರೆ ಹಿಡಿದಿದೆ. ಸೂರ್ಯ ಮತ್ತು ಭೂಮಿಯ ನಡುವಿನ ಸರಾಸರಿ ದೂರ 150 ಮಿಲಿಯನ್ ಕಿಲೋಮೀಟರ್ಗಳಿದ್ದು, ಈಗ ಭೂಮಿ ಮತ್ತು ಸೂರ್ಯನ ಮಧ್ಯಭಾಗದಲ್ಲಿ ಅಂದರೆ ಸುಮಾರು 75 ಮಿಲಿಯನ್ ಕಿಲೋಮೀಟರ್ಗಳ ದೂರದಿಂದ ಚಿತ್ರಗಳನ್ನು ಸೆರೆ ಹಿಡಿಯಲಾಗಿದೆ ಎಂದು ಯೂರೋಪಿಯನ್ ಸ್ಪೇಸ್ ಏಜೆನ್ಸಿ ಮಾಹಿತಿ ನೀಡಿದೆ.
ಎಕ್ಸ್‌ಟ್ರೀಮ್ ಅಲ್ಟ್ರಾವೈಲೆಟ್ ಇಮೇಜರ್ (ಇಯುಐ) ಸಾಧನದಲ್ಲಿ ತೆಗೆದ ಚಿತ್ರಗಳಲ್ಲಿ ಒಂದು ಚಿತ್ರ ಸೂರ್ಯನ ಸಂಪೂರ್ಣ ಹೊರಗಿನ ವಾತಾವರಣವನ್ನು ತೋರಿಸುತ್ತದೆ. ಸೂರ್ಯನ ಹೊರಭಾಗ ಎಂದರೆ ಕರೋನಾ ಚಿತ್ರ ಇದುವರೆಗೆ ತೆಗೆದ ಅತ್ಯಧಿಕ ರೆಸಲ್ಯೂಶನ್ ಚಿತ್ರವಾಗಿದೆ. ಸ್ಪೆಕ್ಟ್ರಲ್ ಇಮೇಜಿಂಗ್ ಆಫ್ ದ ಕರೋನಲ್ ಎನ್ವಿರಾನ್‌ಮೆಂಟ್ (SPICE) ಉಪಕರಣದ ಮೂಲಕ ತೆಗೆದ ಮತ್ತೊಂದು ಚಿತ್ರವು ಸೂರ್ಯನ ಪೂರ್ಣ ಚಿತ್ರವಾಗಿದೆ. ಈ ಚಿತ್ರವನ್ನು ಹೈಡ್ರೋಜನ್ ಅನಿಲದಿಂದ ಹೊರಸೂಸುವ ನೇರಳಾತೀತ ಬೆಳಕಿನ ಲೈಮನ್-ಬೀಟಾ ತರಂಗಾಂತರಗಳ ಮೂಲಕ ಸೆರೆಹಿಡಿಯಲಾಗಿದೆ.