ಸ್ಯಾನ್ ಫ್ರಾನ್ಸಿಸ್ಕೋ(ಅಮೆರಿಕ):ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಿಇಒ ಎಲಾನ್ ಮಸ್ಕ್ ಅವರು ಶೀಘ್ರದಲ್ಲೇ ಫೇಸ್ಬುಕ್, ಟ್ವಿಟರ್ ಥರಹದ ಹೊಸ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಅನ್ನು ರೂಪಿಸಬಹುದು ಎಂದು ಸುಳಿವು ಸಿಕ್ಕಿದೆ. ಟ್ವಿಟರ್‌ನಲ್ಲಿ ಪ್ರಣಯ್ ಪೊಥೋಲ್ ಎಂಬುವರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು ಹೊಸ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ರೂಪಿಸುವ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡುತ್ತಿರುವುದಾಗಿ ಹೇಳಿದ್ದಾರೆ.
ಟ್ವಿಟರ್‌ನಲ್ಲಿ ಪ್ರಣಯ್ ಪೊಥೋಲ್ ಅವರು 'ಮಸ್ಕ್ ಹೊಸ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಅನ್ನು ನಿರ್ಮಿಸುವ ಬಗ್ಗೆ ಯೋಚಿಸುತ್ತೀರಾ?' ಎಂದು ಕೇಳಿದಾಗ 'ನಾನು ಇದನ್ನು ಗಂಭೀರವಾಗಿ ಯೋಚಿಸುತ್ತಿದ್ದೇನೆ' ಎಂದು ಎಲಾನ್ ಮಸ್ಕ್ ಉತ್ತರ ನೀಡಿದ್ದಾರೆ. ಈ ಮೂಲಕ ಹೊಸ ಸೋಶಿಯಲ್ ಮೀಡಿಯಾ ರೂಪಿಸುವ ಚಿಂತನೆ ಎಲಾನ್ ಮಸ್ಕ್ ಅವರಲ್ಲಿರುವುದು ಗೊತ್ತಾಗುತ್ತಿದೆ.
ಮತ್ತೊಂದು ಟ್ವಿಟರ್ ಪೋಸ್ಟ್ನಲ್ಲಿ ಸಮೀಕ್ಷೆ ನಡೆಸಿರುವ ಅವರು 'ಟ್ವಿಟರ್ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತದೆ ಎಂದು ನೀವು ನಂಬುತ್ತೀರಾ?' ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶೇಕಡಾ 70ರಷ್ಟು ಮಂದಿ 'ಇಲ್ಲ' ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಮೀಕ್ಷೆಯ ಫಲಿತಾಂಶಕ್ಕೆ ಪ್ರತಿಕ್ರಿಯೆ ನೀಡಿರುವ ಎಲಾನ್ ಮಸ್ಕ್ ಅವರು ಟ್ವಿಟರ್ ವಾಸ್ತವಿಕವಾಗಿ ಪಟ್ಟಣದ ಒಂದು ಪ್ರದೇಶವಾಗಿ ಕಾರ್ಯನಿರ್ವಹಿಸುತ್ತದೆ. ವಾಕ್ ಸ್ವಾತಂತ್ರ್ಯದ ತತ್ವಗಳನ್ನು ಅನುಸರಿಸಲು ವಿಫಲವಾದರೆ ಮೂಲಭೂತವಾಗಿ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತದೆ. ಏನು ಮಾಡಬೇಕು? ಎಂದು ಕೇಳುವುದರ ಜೊತೆಗೆ ಬಳಕೆದಾರರಿಗೆ "ಹೊಸ ವೇದಿಕೆ ಅಗತ್ಯವಿದೆಯೇ? ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಹೊಸ ಸಾಮಾಜಿಕ ಮಾಧ್ಯಮದ ಸುಳಿವು ನೀಡುತ್ತಿದ್ದಾರೆ ಎನ್ನಲಾಗ್ತಿದೆ.
ಇದನ್ನೂ ಓದಿ:ಹೈದರಾಬಾದ್ ಕಂಪನಿಯಿಂದ ಭಾರತದ ಭದ್ರತಾ ಪಡೆಗಳಿಗೆ ಕಣ್ಗಾವಲು ಸಾಧನ ಪೂರೈಕೆ