ನವದೆಹಲಿ:ಹಿಂದಿನ ಟ್ವಿಟರ್ ಆಗಿದ್ದ 'ಎಕ್ಸ್' ಅನ್ನು ಅದರ ಮಾಲೀಕ, ವಿಶ್ವದ ನಂ.1 ಧನಿಕ ಎಲಾನ್ ಮಸ್ಕ್ ಪ್ರಯೋಗಶಾಲೆಯಂತೆ ಬಳಸುತ್ತಿರುವುದು ಕೆಲ ನಿರ್ಧಾರಗಳಿಂದ ಗೊತ್ತಾಗುತ್ತಿದೆ. ಇದೀಗ ಮಸ್ಕ್ ಮತ್ತೊಂದು ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಸಾಮಾಜಿಕ ವೇದಿಕೆಯಲ್ಲೇ ಸುದ್ದಿಗಳನ್ನು ಪ್ರಕಟಿಸಲು ಪತ್ರಕರ್ತರಿಗೆ ಬಹಿರಂಗ ಆಹ್ವಾನ ನೀಡಿದ್ದಾರೆ.
ಸುದ್ದಿಗಳ ಕುರಿತಾದ ಪ್ರಮುಖಾಂಶ, ಅದರ ಪಠ್ಯ, ಪೋಸ್ಟ್ಗಳನ್ನು ಎಕ್ಸ್ನಿಂದ ಅಳಿಸಿ ಹಾಕುತ್ತಿರುವ ನಡುವೆಯೇ ಮಸ್ಕ್ ನೇರವಾಗಿ ಇಲ್ಲಿಯೇ ಸುದ್ದಿಗಳನ್ನು ಪ್ರಕಟಿಸಲು ಪತ್ರಕರ್ತರಿಗೆ ಅವಕಾಶ ನೀಡಿರುವುದು ಕುತೂಹಲ ಮೂಡಿಸಿದೆ. ಸುದ್ದಿಗಳನ್ನು ಪ್ರಕಟಿಸುವಷ್ಟು ಅಗತ್ಯ ಜಾಗ ಎಕ್ಸ್ನಲ್ಲಿ ಇಲ್ಲವಾದರೂ, ಅದಕ್ಕೆ ಅವಕಾಶ ಮಾಡಿಕೊಟ್ಟಲ್ಲಿ ಮೈಕ್ರೋಬ್ಲಾಗಿಂಗ್ ಬೆಳೆಯುವ ದೂರದೃಷ್ಟಿ ಇದರ ಹಿಂದಿದೆ ಎಂದು ವಿಶ್ಲೇಷಿಸಲಾಗಿದೆ.
ನೀವು ಬರೆಯಲು ಹೆಚ್ಚಿನ ಸ್ವಾತಂತ್ರ್ಯ ಮತ್ತು ಹೆಚ್ಚು ಆದಾಯ ಗಳಿಸಲು ಬಯಸುವ ಪತ್ರಕರ್ತರಾಗಿದ್ದರೆ, ಈ ವೇದಿಕೆಯಲ್ಲಿ ನೇರವಾಗಿ ಸುದ್ದಿಗಳನ್ನು ಪ್ರಕಟಿಸಿ ಎಂದು ಎಲಾನ್ ಮಸ್ಕ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಒಬ್ಬ ಫಾಲೋವರ್ ಪ್ರತಿಕ್ರಿಯಿಸಿ, ಹಾಗಾದರೆ ಸುದ್ದಿಗಳನ್ನು ಪ್ರಕಟಿಸುವ ಉತ್ತಮ ಸಾಧನವನ್ನು ನೀಡಿ ಎಂದು ಕೋರಿದ್ದಾರೆ. ಇದಕ್ಕೆ ಮಸ್ಕ್ ಸದ್ಯಕ್ಕೆ ಪ್ರತಿಕ್ರಿಯಿಸಿಲ್ಲ.
ಸುದ್ದಿ ಮಾಧ್ಯಮವಾಗುತ್ತಾ X?:ಎಲಾನ್ ಮಸ್ಕ್ ಎಕ್ಸ್ ಮೈಕ್ರೋಬ್ಲಾಗಿಂಗ್ ಅನ್ನು ಸುದ್ದಿ, ಲೇಖನಗಳ ಮಾಧ್ಯಮವಾಗಿ ಬದಲಿಸಲು ಯೋಚಿಸಿದ್ದಾಗಿ ಕಂಡುಬಂದಿದೆ. ಸುದ್ದಿಗಳನ್ನು ಎಕ್ಸ್ನಲ್ಲೇ ಪ್ರಕಟಿಸಿ ಎಂದು ನೇರವಾಗಿ ಅವರೇ ಕೋರುವ ಮೂಲಕ ಎಕ್ಸ್ ಮತ್ತೊಂದು ಬದಲಾವಣೆಗೆ ಸಜ್ಜಾಗಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ.