ನವದೆಹಲಿ: ದೂರದರ್ಶನ ವಾಹಿನಿಯಲ್ಲಿ 1987-88ರ ಸಂದರ್ಭದಲ್ಲಿ ಮೂಡಿಬಂದ ರಮಾನಂದ್ ಸಾಗರ್ ಅವರ ನಿರ್ದೇಶನದ ರಾಮಾಯಣ ಮತ್ತು 1988-90ರಲ್ಲಿ ಬಿ.ಆರ್.ಚೋಪ್ರಾ ನಿರ್ದೇಶನದ ಮಹಾಭಾರತ ಕಥಾ ಪ್ರಸಂಗವನ್ನು ಯಾರು ತಾನೇ ಮರೆಯಲು ಸಾಧ್ಯ ಹೇಳಿ?. ಈ ಧಾರವಾಹಿಗಳೊಂದಿಗೆ ದೂರದರ್ಶನ ವಾಹಿನಿ ಕೂಡ ಭಾರತೀಯರೊಂದಿಗೆ ವಿಶೇಷ ಬಂಧ ಹೊಂದಿದೆ. 1987ರಲ್ಲಿ ಆರ್.ಕೆ.ನಾರಾಯಣ್ ಅವರ ಮಾಲ್ಗುಡಿ ಡೇಸ್, 1994ರಲ್ಲಿ ಚಂದ್ರಕಾಂತ್, 1997ರಲ್ಲಿ ಶಕ್ತಿ ಮಾನ್ ಧಾರಾವಾಹಿಗಳು ಅತಿ ಹೆಚ್ಚು ವೀಕ್ಷಣೆ ಪಡೆಯುವುದರೊಂದಿಗೆ ಸರ್ಕಾರಕ್ಕೆ ಹೆಚ್ಚು ಆದಾಯವನ್ನೂ ತಂದುಕೊಟ್ಟಿವೆ.
1965ರಲ್ಲಿ ಪ್ರತಿಮಾ ಪುರಿ ವಾಚನದ ಐದು ನಿಮಿಷದ ಟಿವಿ ಸುದ್ದಿಗಾಗಿ ದೊಡ್ಡ ಜನಸಮೂಹವೇ ಕಾಯುತ್ತಿತ್ತು. ಇಂತಹ ಹಲವು ಸಂಗತಿಗಳೊಂದಿಗೆ ಭಾರತೀಯರು ದೂರದರ್ಶನ ಸವಿನೆನಪುಗಳನ್ನು ಇಂದಿಗೂ ಮೆಲುಕು ಹಾಕುತ್ತಿರುತ್ತಾರೆ.
ಸೆಪ್ಟೆಂಬರ್ 15, 1959ರಲ್ಲಿ ಭಾರತ ಸರ್ಕಾರ ಡಿಡಿ ಎಂದೇ ಜನಪ್ರಿಯವಾಗಿರುವ ದೂರದರ್ಶನ ಎಂಬ ರಾಷ್ಟ್ರೀಯ ಸಾರ್ವಜನಿಕ ಸೇವಾ ಬ್ರಾಡ್ಕಾಸ್ಟ್ ಅನ್ನು ನವದೆಹಲಿಯಲ್ಲಿ ಆರಂಭಿಸಿತ್ತು. ಭಾರತೀಯರ ಪಾಲಿಗೆ ಇದೊಂದು ದೊಡ್ಡ ಮನರಂಜನೆಯ ಜೊತೆಗೆ ಜ್ಞಾನ ಮತ್ತು ಸಂಬಂಧ ಬೆಸೆಯುವ ಕೊಂಡಿಯೂ ಆಯಿತು. ಇಂತಹ ದೂರದರ್ಶನಕ್ಕೆ ಇದೀಗ 64ರ ಸಂಭ್ರಮ!
1959ರಲ್ಲಿ ದೆಹಲಿಯ ಎಐಆರ್ (ಆಲ್ ಇಂಡಿಯಾ ರೇಡಿಯೋ) ಸ್ಟುಡಿಯೋದಿಂದ ಡಿಡಿಯನ್ನು ಪೈಲಟ್ ಪ್ರಾಜೆಕ್ಟ್ ಆಗಿ ಅಂದಿನ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಉದ್ಘಾಟಿಸಿದ್ದರು. ಮೊದಲಿಗೆ ಒಂದು ಗಂಟೆಗಳ ಸಾಮಾಜಿಕ ಶಿಕ್ಷಣದ ಕಾರ್ಯಕ್ರಮವನ್ನು ವಾರದಲ್ಲಿ ಎರಡು ಬಾರಿ ಪ್ರಸಾರ ಮಾಡಲಾಗುತ್ತಿತ್ತು. 1965ರಲ್ಲಿ ದೈನಂದಿನ ಪ್ರಸರಣೆಯು ಬೆಳಗ್ಗೆ ಮತ್ತು ಸಂಜೆ ಆರಂಭವಾಯಿತು. ಇದರ ಜೊತೆಗೆ ಐದು ನಿಮಿಷದ ಸುದ್ದಿ ಕೂಡ ಪ್ರಸಾರ ಕಾರ್ಯಾರಂಭಿಸಿತು.
ಡಿಡಿಯ ಐ ಲೋಗೋವನ್ನು 1970ರಲ್ಲಿ ಎನ್ಐಡಿಯ ಹಳೆಯ ವಿದ್ಯಾರ್ಥಿಯಾಗಿದ್ದ ದೇವಶೀಶ್ ಭಟ್ಟಾಚಾರ್ಯ ವಿನ್ಯಾಸ ಮಾಡಿದರು. ಈ ಲೋಗೋವನ್ನು ಪ್ರಧಾನಿ ಇಂದಿರಾ ಗಾಂಧಿ ಆಯ್ಕೆ ಮಾಡಿದ್ದರು. ಡಿಡಿಯ ಸಿಗ್ನೇಚರ್ ಟ್ಯೂನ್ ಅನ್ನು ಪಂಡಿತ್ ರವಿ ಶಂಕರ್ ಮತ್ತು ಉಸ್ತಾದ್ ಅಲಿ ಅಹ್ಮದ್ ಹುಸೇನ್ ಖಾನ್ 1976ರಲ್ಲಿ ಸಂಯೋಜಿಸಿದ್ದರು.
ದೂರದರ್ಶನ ಭಾರತದ ಅತಿದೊಡ್ಡ ಸಾರ್ವಜನಿಕ ಬ್ರಾಡ್ಕಾಸ್ಟ್ ಆಗಿರುವ ಪ್ರಸಾರ ಭಾರತಿ ಭಾಗವಾಗಿದ್ದು, ವಿಸ್ತಾರವಾದ ಟ್ರಾನ್ಸ್ಮಿಷನ್ ಮೂಲಸೌಕರ್ಯ ಮತ್ತು ಸ್ಟುಡಿಯೋ ಹೊಂದಿದೆ. ದೂರದರ್ಶನ್ ವಿಟಿ, ರೇಡಿಯೋ ಮತ್ತು ಆನ್ಲೈನ್ ಸೇವೆಯ ಮೂಲಕ ಮೆಟ್ರೋಪಾಲಿಟನ್ ಮತ್ತು ಪ್ರಾದೇಶಿಕತೆ ಸೇರಿದಂತೆ ಅಂತರರಾಷ್ಟ್ರೀಯವಾಗಿ ನೆಟ್‌ವರ್ಕ್ ಮತ್ತು ರೇಡಿಯೋವನ್ನು ದೇಶದೆಲ್ಲೆಡೆ ವಿಸ್ತರಿಸಿದೆ.