ಹೈದರಾಬಾದ್: ಬ್ಯಾಟರಿಯನ್ನು ರಿಚಾರ್ಜ್ ಮಾಡುವ ಅಗತ್ಯವಿಲ್ಲ. ಈಗ ಮಾರುಕಟ್ಟೆಯಲ್ಲಿರುವ ಬ್ಯಾಟರಿಗಳಿಗೆ ಹೋಲಿಸಿದರೆ ಈ ಬ್ಯಾಟರಿಯ ಮೈಲೇಜ್ ಹೆಚ್ಚು. ಹೆಚ್ಚು ಸುರಕ್ಷಿತವಾಗಿರುವುದಲ್ಲದೇ ಮತ್ತು ಮಾಲಿನ್ಯ ಉಂಟುಮಾಡುವ ಭಯವೂ ಇಲ್ಲ. ಮನೆಯಲ್ಲಿ ಅಡುಗೆ ಅನಿಲ ಖಾಲಿಯಾದಾಗ ಸಿಲಿಂಡರ್ ಬದಲಾಯಿಸುವಂತೆಯೇ ಈ ಬ್ಯಾಟರಿಯನ್ನು ಬದಲಾಯಿಸಬಹುದು. ಉತ್ಪಾದನಾ ಸಂಪನ್ಮೂಲಗಳನ್ನು ಆಮದು ಮಾಡಿಕೊಳ್ಳುವ ಅಗತ್ಯವಿಲ್ಲ.
ದೇಶೀಯವಾಗಿ ಹೇರಳವಾಗಿ ದೊರೆಯುವ ಅಲ್ಯೂಮಿನಿಯಂ ಈ ಬ್ಯಾಟರಿಯ ಕೀ ವಸ್ತು ಎನ್ನುತ್ತಾರೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಸಂಶೋಧನಾ ವಿಭಾಗದ ನಿರ್ದೇಶಕ ಹಾಗೂ ಕಂಪನಿಯ ಆಡಳಿತ ಮಂಡಳಿ ಸದಸ್ಯ ಡಾ.ಎಸ್.ಎಸ್.ವಿ.ರಾಮಕುಮಾರ್. ಹೈದರಾಬಾದ್ಗೆ ಆಗಮಿಸಿದ್ದ ಇವರು ಈಟಿವಿ ಭಾರತಕ್ಕೆ ಸಂದರ್ಶನಕ್ಕೆ ಸಿಕ್ಕಿದ್ದು, ಈ ರೀತಿಯ ಬ್ಯಾಟರಿಗಳು ಮುಂದೊಂದು ದಿನ ನಮಗೆ ಲಭ್ಯವಾಗುವಂತಾದರೆ ವಾಹನ ವಲಯದಲ್ಲಿ ಯಾವ ರೀತಿಯ ಬದಲಾವಣೆಗಳು ಸಾಧ್ಯವಾಗಬಹುದು ಎಂಬುದನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
ಅಲ್ಯೂಮಿನಿಯಂ ಬ್ಯಾಟರಿ ರೀಚಾರ್ಜ್ ಮಾಡುವುದು ಹೇಗೆ?:ರಾಮಕುಮಾರ್:ಈ ಬ್ಯಾಟರಿಗೆ ಕರೆಂಟ್ ಬೇಕಾಗಿಲ್ಲ. ರೀಚಾರ್ಜ್ ಮಾಡುವ ಅಗತ್ಯವಿಲ್ಲ. ಈ ಬ್ಯಾಟರಿಗಳು ಸ್ಫೋಟಗೊಳ್ಳುತ್ತದೆ ಎಂದು ಭಯಪಡುವ ಅಗತ್ಯವಿಲ್ಲ. ಬ್ಯಾಟರಿಗಳಲ್ಲಿ ಚಾರ್ಜ್ ಕಡಿಮೆಯಾದಾಗ, ಪೆಟ್ರೋಲ್ ಸ್ಟೇಷನ್‌ಗಳು ಅಥವಾ ಔಟ್‌ಲೆಟ್‌ಗಳಲ್ಲಿ ಬ್ಯಾಟರಿಯನ್ನು ನಿಮಿಷಗಳಲ್ಲಿ ಬದಲಾಯಿಸಬಹುದು.
ಇದು ನಾವು ಅಡುಗೆ ಅನಿಲ ಸಿಲಿಂಡರ್ ಖಾಲಿ ಆದಾಗ ಬದಲಾಯಿಸುವಂತೆಯೇ ಆಗಿದೆ. ಈ ಬ್ಯಾಟರಿಗಳನ್ನು ಅಳವಡಿಸಬಹುದಾದ ಕಾರುಗಳನ್ನು ಕಂಪನಿಗಳು ಬ್ಯಾಟರಿಗಳಿಲ್ಲದೇ ನೀಡುತ್ತವೆ. ಈ ಬ್ಯಾಟರಿಗಳ ಠೇವಣಿ ಅಡುಗೆ ಅನಿಲ ಸಿಲಿಂಡರ್‌ಗೆ ಠೇವಣಿ ಇದ್ದಂತೆ. ಠೇವಣಿ ಎಷ್ಟು? ವಿನಿಮಯವಾಗಿ ಎಷ್ಟು ಪಾವತಿಸಬೇಕು? ಎಂಬುದು ಇನ್ನೂ ಅಂತಿಮಗೊಡಿಲ್ಲ. ಲಿಥಿಯಂ ಬ್ಯಾಟರಿ ವೆಚ್ಚಗಳಿಗೆ ಹೋಲಿಸಿದರೆ ವಾಹನ ನಿರ್ವಹಣೆ ವೆಚ್ಚವು ಈ ಬ್ಯಾಟರಿಗಳಲ್ಲಿ 50 ಪ್ರತಿಶತದಷ್ಟು ಕಡಿಮೆಯಾಗಿರುತ್ತದೆ.
ಅಲ್ಯೂಮಿನಿಯಂ ಏರ್ ಬ್ಯಾಟರಿ ವಾಹನಗಳು ಯಾವಾಗ ಲಭ್ಯವಿರುತ್ತವೆ?:ಮೊದಲ ಹಂತದ ಬ್ಯಾಟರಿಗಳು 2024 ರ ಅಂತ್ಯದ ವೇಳೆಗೆ ದೇಶದಲ್ಲಿ ಲಭ್ಯವಿರುತ್ತವೆ. ಅಷ್ಟರೊಳಗೆ ವಾಹನಗಳು ಬರುವ ಸಾಧ್ಯತೆ ಹೆಚ್ಚಿದೆ.
ಈ ಬ್ಯಾಟರಿಯೊಂದಿಗೆ ನೀವು ಎಷ್ಟು ಕಿಲೋಮೀಟರ್ ಪ್ರಯಾಣಿಸಬಹುದು?:ಸಂಶೋಧನೆ ಅಂತಿಮ ಹಂತದಲ್ಲಿದೆ. ಇತ್ತೀಚಿಗೆ ಅಲ್ಯೂಮಿನಿಯಂ ಏರ್ ಬ್ಯಾಟರಿ ಹೊಂದಿದ ತ್ರಿಚಕ್ರ ವಾಹನವೊಂದು 450 ಕಿಲೋಮೀಟರ್ ಪ್ರಯಾಣಿಸಿದೆ. ಅದೇ ವಾಹನವನ್ನು ಲಿಥಿಯಂ ಬ್ಯಾಟರಿಯಿಂದ ಓಡಿಸಿದರೆ 80 ರಿಂದ 100 ಕಿ.ಮೀ ಓಡಿತ್ತು.
ನೀವು ದೇಶದ ಯಾವ ವಾಹನ ತಯಾರಿಕಾ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದೀರಿ?:ಈ ಬ್ಯಾಟರಿ ಚಾಲಿತ ವಾಹನಗಳನ್ನು ತಯಾರಿಸಲು ನಾವು ಮಾರುತಿ, ಮಹೀಂದ್ರಾ ಮತ್ತು ಮಹೀಂದ್ರಾ ಮತ್ತು ಟಾಟಾ ಮೋಟಾರ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಈ ಕ್ಷೇತ್ರದಲ್ಲಿ, ಅಲ್ಯೂಮಿನಿಯಂ ಬ್ಯಾಟರಿಯನ್ನು ಅಳವಡಿಸಿದರೆ ಟಾಟಾ ಮೋಟಾರ್ಸ್ ಕಾರು 500 ಕಿಲೋಮೀಟರ್‌ಗಳಿಗಿಂತ ಹೆಚ್ಚು ಪ್ರಯಾಣಿಸಬಹುದು ಎಂದು ನಾವು ಕಂಡುಕೊಂಡಿದ್ದೇವೆ. ಮಾರುತಿ, ಮಹೀಂದ್ರಾ ಮತ್ತು ಮಹೀಂದ್ರಾ ಕಂಪನಿಗಳು ಸಹ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸುತ್ತಿವೆ. ಮಾಲಿನ್ಯ ತಗ್ಗಿಸುವಲ್ಲಿ ನಮ್ಮ ಛಾಪು ಮೂಡಿಸುವ ಗುರಿ ಹೊಂದಿದ್ದೇವೆ.
ಅಲ್ಯೂಮಿನಿಯಂನಿಂದ ಬ್ಯಾಟರಿ ಮಾಡಬಹುದು ಎಂಬುದನ್ನು ಹೇಗೆ ಕಂಡುಕೊಂಡಿರಿ?:ಆಮದುಗಳನ್ನು ಅವಲಂಬಿಸದ ನೈಸರ್ಗಿಕ ಸಂಪನ್ಮೂಲಗಳಿಂದ ಬ್ಯಾಟರಿಗಳನ್ನು ತಯಾರಿಸುವ ಅಧ್ಯಯನದ ವೇಳೆ ಅಲ್ಯೂಮಿನಿಯಂ ಬ್ಯಾಟರಿ ತಯಾರಿಸಲು ಪ್ರಮುಖ ವಸ್ತುವಾಗಬಹುದು ಎಂಬುದು ಗೊತ್ತಾಯಿತು. ಆ ನಿಕ್ಷೇಪಗಳು ಹೇರಳವಾಗಿರುವುದು ಕೂಡ ಒಂದು ಪ್ಲಸ್ ಪಾಯಿಂಟ್ ಆಗಿದೆ. ನಮ್ಮ ಯೋಜನೆಗೆ ಸರ್ಕಾರ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದೆ. ಜಗತ್ತಿನಲ್ಲಿ ಎಲ್ಲಿಯಾದರೂ ಅಲ್ಯೂಮಿನಿಯಂನಲ್ಲಿ ಸಂಶೋಧನೆ ನಡೆಯುತ್ತಿದೆಯೇ ಎಂದು ನಾವು ಅನ್ವೇಷಿಸಿದ್ದೇವೆ. ಬಾರ್ ಇಲಾನ್ ವಿಶ್ವವಿದ್ಯಾಲಯ (ಇಸ್ರೇಲ್) ಈ ಸಂಶೋಧನೆ ಮಾಡಿದೆ.
ಫೈನರ್ಜಿ ಕಂಪನಿಯೊಂದಿಗೆ ನೀವು ಯಾವ ರೀತಿಯ ಒಪ್ಪಂದ ಮಾಡಿಕೊಂಡಿದ್ದೀರಿ?:ನಾವು ಬಾರ್ ಇಲಾನ್ ವಿಶ್ವವಿದ್ಯಾಲಯವನ್ನು ಸಂಪರ್ಕಿಸಿದಾಗ, ಅವರು ಪೇಟೆಂಟ್ ಮತ್ತು ಸಂಶೋಧನೆಯನ್ನು ಫೈನರ್ಜಿ (ಇಸ್ರೇಲ್) ಎಂಬ ಬೀಜ ಕಂಪನಿಗೆ ಮಾರಾಟ ಮಾಡಿದ್ದಾರೆ ಎಂಬುದು ತಿಳಿಯಿತು. ಆದ್ದರಿಂದ ನಾವು ಆ ಕಂಪನಿಯನ್ನು ಸಂಪರ್ಕಿಸಿ ಭಾರತದಲ್ಲಿ ಆ ತಂತ್ರಜ್ಞಾನದೊಂದಿಗೆ ಬ್ಯಾಟರಿಗಳನ್ನು ತಯಾರಿಸಲು ಒಪ್ಪಿಕೊಂಡೆವು. ಇದು 50:50 ಅನುಪಾತದ ಜಂಟಿ ಉದ್ಯಮವಾಗಿದೆ. ಮೊದಲ ಹಂತದಲ್ಲಿ ನಾವು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತೇವೆ. ನಂತರದಲ್ಲಿ ನಾವು ರಫ್ತು ಕೂಡ ಮಾಡುತ್ತೇವೆ.
500 ಕಿಮೀ ಇದುವರೆಗಿನ ಗರಿಷ್ಠ ಸಂಖ್ಯೆಯೇ?:ಲಿಥಿಯಂ ಪ್ರತಿ ಕಿಲೋಗ್ರಾಂಗೆ ನಾಲ್ಕು ಕಿಲೋವ್ಯಾಟ್‌ಗಳಷ್ಟು ಶಕ್ತಿಯ ಸಾಂದ್ರತೆ ಹೊಂದಿದ್ದರೆ, ಅಲ್ಯೂಮಿನಿಯಂ ಎಂಟು ಕಿಲೋವ್ಯಾಟ್‌ಗಳಷ್ಟು ಶಕ್ತಿ ಹೊಂದಿದೆ. ಪ್ರಸ್ತುತ ನಾವು ಕೇವಲ 4 ಕಿಲೋವ್ಯಾಟ್ ಸಾಂದ್ರತೆಯನ್ನು ಹೊರತೆಗೆಯುತ್ತಿದ್ದೇವೆ. ಇದನ್ನು ಇನ್ನಷ್ಟು ಸುಧಾರಿಸಲು ನಮ್ಮ ವಿಜ್ಞಾನಿಗಳು ಫೈನರ್ಜಿಯೊಂದಿಗೆ ಜಂಟಿ ಸಂಶೋಧನೆ ನಡೆಸುತ್ತಿದ್ದಾರೆ. ಈ ಸಾಂದ್ರತೆ ಹೆಚ್ಚಾದಂತೆ ಮೈಲೇಜ್ ಹೆಚ್ಚುತ್ತದೆ. ಸಾಂದ್ರತೆಯು 6 ರಿಂದ 7 ಕಿಲೋವ್ಯಾಟ್‌ಗಳಿಗೆ ಹೆಚ್ಚಾದರೆ, ಮೈಲೇಜ್ 800 ಕಿಲೋಮೀಟರ್‌ಗಳವರೆಗೆ ಹೆಚ್ಚಾಗುತ್ತದೆ.
ಎಲೆಕ್ಟ್ರಿಕ್ ಕಾರು ಎಂದಾಕ್ಷಣ ನೆನಪಾಗುವುದು ಟೆಸ್ಲಾ ! ಕಂಪನಿಯು ಈ ತಂತ್ರಜ್ಞಾನವನ್ನು ಏಕೆ ಅಳವಡಿಸಿಕೊಂಡಿಲ್ಲ?:ಟೆಸ್ಲಾ ಕಂಪನಿಯವರು ನಮಗಿಂತ ಮೊದಲು ಅಲ್ಯೂಮಿನಿಯಂ ತಂತ್ರಜ್ಞಾನವನ್ನು ಕಂಡು ಹಿಡಿದರು. ಆ ಸಮಯಕ್ಕೆ ಆ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆ ತೃಪ್ತಿಕರವಾಗಿರಲಿಲ್ಲ ಮತ್ತು ಅವರು ಆ ಯೋಜನೆಯಿಂದ ಹಿಂದೆ ಸರಿದರು. ಅದರ ನಂತರ, ಸ್ಟಾರ್ಟ್ಅಪ್ ಮಾಡಿದ ಸಂಶೋಧನೆ ಉತ್ತಮ ಫಲಿತಾಂಶಗಳನ್ನು ನೀಡಿತು ಮತ್ತು IOC ಒಪ್ಪಂದವನ್ನು ಮಾಡಿಕೊಂಡಿತು.
ಅಲ್ಯೂಮಿನಿಯಂ ಏರ್ ಬ್ಯಾಟರಿಗಳಿಂದ ವಾಹನ ಚಾಲಕರಿಗೆ ಹೆಚ್ಚುವರಿ ಪ್ರಯೋಜನವೇನು?:ಅಲ್ಯೂಮಿನಿಯಂ ಬ್ಯಾಟರಿಯು ವಾಹನ ಚಾಲಕರಿಗೆ ಮಾತ್ರವಲ್ಲದೆ ದೇಶದ ಆರ್ಥಿಕತೆಯಲ್ಲಿಯೂ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ. ದೇಶದಲ್ಲಿ ಅಲ್ಯೂಮಿನಿಯಂ ನಿಕ್ಷೇಪಗಳು ದೊಡ್ಡದಾಗಿದೆ. ಈ ಬ್ಯಾಟರಿಯನ್ನು ವಾಹನಗಳಲ್ಲಿ ಬಳಸುವುದರಿಂದ, ಇದು ಸಕ್ರಿಯ ಅಲ್ಯೂಮಿನಿಯಂ ಟ್ರೈಆಕ್ಸೈಡ್ ಆಗಿ ರೂಪಾಂತರಗೊಳ್ಳುತ್ತದೆ.
ಅದರಿಂದ ಅಲ್ಯೂಮಿನಿಯಂ ಅನ್ನು ಮರುಬಳಕೆ ಮಾಡಬಹುದು. ಈ ಪುನರುತ್ಪಾದನೆಗಾಗಿ ನಾವು ಹಿಂಡಾಲ್ಕೊ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ. ಲಿಥಿಯಂ ಬ್ಯಾಟರಿಯ ಬೆಲೆಗಿಂತ ಕನಿಷ್ಠ 50 ಪ್ರತಿಶತ ಕಡಿಮೆಗೆ ಅಲ್ಯೂಮಿನಿಯಂ ಬ್ಯಾಟರಿಯನ್ನು ಬಳಸಬಹುದು.
ಅಲ್ಯೂಮಿನಿಯಂ ಬ್ಯಾಟರಿಯನ್ನು ಹೇಗೆ ಕಂಡು ಹಿಡಿಯಲಾಯಿತು?:ಇಸ್ರೇಲ್ ವಿಶ್ವವಿದ್ಯಾಲಯದ ಮೂಲ ಸಂಶೋಧನೆ. ಅದೇ ದೇಶದ ಸ್ಟಾರ್ಟಪ್ ಅಲ್ಯೂಮಿನಿಯಂ-ಏರ್ ಬ್ಯಾಟರಿಯನ್ನು ಚುರುಕುಗೊಳಿಸಿತು. ಆದರೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಅದನ್ನು ಸಂಸ್ಕರಿಸಿ ಆವಿಷ್ಕರಿಸಿತು. ವಾಹನ ಕ್ಷೇತ್ರದಲ್ಲಿ ಇದೊಂದು ಕ್ರಾಂತಿ. ಅಷ್ಟೇ ಅಲ್ಲ, ವಾಹನ ಸವಾರರಿಗೆ ನಿರ್ವಹಣಾ ವೆಚ್ಚ ಅರ್ಧಕ್ಕಿಂತ ಹೆಚ್ಚು ಕಡಿಮೆಯಾಗುತ್ತದೆ. ಸಂಶೋಧನೆಗಳು ಹೆಚ್ಚು ನಿರ್ಣಾಯಕವಾಗಿದ್ದರೆ ಮೈಲೇಜ್ ಮತ್ತಷ್ಟು ಹೆಚ್ಚಾಗುತ್ತದೆ. ಈ ಬ್ಯಾಟರಿಗಳು 2024 ರ ಅಂತ್ಯದ ವೇಳೆಗೆ ಲಭ್ಯವಿರುತ್ತವೆ.
ರಾಮಕುಮಾರ್ ಯಾರು?:ಆಂಧ್ರಪ್ರದೇಶದ ಮಚಲಿಪಟ್ಟಣಂ ಮೂಲದ ರಾಮಕುಮಾರ್ ಅವರು ಆಂಧ್ರ ವಿಶ್ವವಿದ್ಯಾಲಯದಲ್ಲಿ ರಸಾಯನಶಾಸ್ತ್ರದಲ್ಲಿ ಎಂ.ಎಸ್ಸಿ ಪದವೀಧರರು. ಅವರು ಐಐಟಿ, ರೂರ್ಕಿಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಮೂರು ದಶಕಗಳಿಗೂ ಹೆಚ್ಚು ಕಾಲ ಹಲವು ರೀತಿಯ ಸಂಶೋಧನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಬರೆದ 150 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ವಿವಿಧ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ.
ವೈಯಕ್ತಿಕವಾಗಿ ಇವರು ಮಾಡಿದ ಸಂಶೋಧನೆಗಳಿಗೆ 55 ಪೇಟೆಂಟ್‌ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅವರ ಅಧಿಕಾರಾವಧಿಯಲ್ಲಿ, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಾವಿರಕ್ಕೂ ಹೆಚ್ಚು ಪೇಟೆಂಟ್‌ಗಳನ್ನು ಪಡೆದುಕೊಂಡಿದೆ. ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದ ಅವರು ದೇಶ ಮತ್ತು ವಿದೇಶಗಳಲ್ಲಿ ಅನೇಕ ಸಂಸ್ಥೆಗಳಲ್ಲಿ ಮಂಡಳಿಯ ಸದಸ್ಯ ಮತ್ತು ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ:ನೈಸರ್ಗಿಕ ಇಂಧನ ವಿಮಾನ ತಯಾರಿಕೆ: ಬೋಯಿಂಗ್ ಜೊತೆ ನಾಸಾ ಒಪ್ಪಂದ