ಸ್ಯಾನ್ ಫ್ರಾನ್ಸಿಸ್ಕೋ: ಚಾಟ್ ಜಿಪಿಟಿ ತಯಾರಕ ಕಂಪನಿಯಾಗಿರುವ ಓಪನ್ ಎಐ ನಿಂದ ಸ್ಯಾಮ್ ಆಲ್ಟ್ಮ್ಯಾನ್ ಅವರನ್ನು ಹೊರಹಾಕಲು ಓಪನ್ ಎಐ ಅಭಿವೃದ್ಧಿಪಡಿಸುತ್ತಿರುವ ಒಂದು ಸೀಕ್ರೆಟ್ ಎಐ ಸಾಧನ ಕಾರಣವಾಗಿತ್ತಾ ಎಂಬ ವಿಷಯ ಈಗ ಚರ್ಚೆಯ ವಿಷಯವಾಗಿದೆ. ಓಪನ್ ಎಐ ಅಭಿವೃದ್ಧಿಪಡಿಸುತ್ತಿರುವ 'ಕ್ಯೂ' (ಕ್ಯೂ-ಸ್ಟಾರ್ ಎಂದು ಉಚ್ಚರಿಸಲಾಗುತ್ತದೆ) ಹೆಸರಿನ ರಹಸ್ಯ ಎಐ ಯೋಜನೆ ಇದರ ಹಿಂದಿರಬಹುದು ಎನ್ನಲಾಗಿದೆ.
ವರದಿಗಳ ಪ್ರಕಾರ, ಕಂಪನಿಯಲ್ಲಿನ ಹಲವಾರು ಸಿಬ್ಬಂದಿ ಸಂಶೋಧಕರು ಓಪನ್ಎಐ ಮಂಡಳಿಗೆ ಪತ್ರವೊಂದನ್ನು ಬರೆದಿದ್ದು, ಪ್ರಬಲವಾದ ಎಐ ತಯಾರಿಕೆಯು ಮಾನವ ಕುಲಕ್ಕೆ ಅಪಾಯ ತರಬಹುದು ಎಂದು ಎಂದು ಎಚ್ಚರಿಸಿದ್ದರು. ಈ ಪತ್ರಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿಯ ಪ್ರಕಾರ, ಪತ್ರ ಮತ್ತು ಎಐ ಅಲ್ಗಾರಿದಮ್ ಆಲ್ಟ್ಮ್ಯಾನ್ ಅವರನ್ನು ಮಂಡಳಿಯು ಹೊರಹಾಕಲು ಕಾರಣವಾಯಿತು. ಇದಕ್ಕೂ ಮುನ್ನ ತಿಳಿಯದ ಈ ಪತ್ರದ ವಿಚಾರ ಸೇರಿದಂತೆ ಇನ್ನೂ ಹಲವಾರು ವಿಷಯಗಳಿಂದಾಗಿ ಅವರನ್ನು ವಜಾ ಮಾಡಲಾಗಿತ್ತು ಎನ್ನಲಾಗಿದೆ.
ಆದರೆ ಪತ್ರ ಬರೆದ ಸಂಶೋಧಕರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಓಪನ್ಎಐ ಕೂಡ ಪ್ರತಿಕ್ರಿಯಿಸಿಲ್ಲ. ಕೃತಕ ಸಾಮಾನ್ಯ ಬುದ್ಧಿಮತ್ತೆ (ಎಜಿಐ) ಎಂದೂ ಕರೆಯಲ್ಪಡುವ ಸೂಪರ್ ಇಂಟೆಲಿಜೆನ್ಸ್ ತಯಾರಿಕೆಯಲ್ಲಿ ಮಹತ್ವದ ಹೆಜ್ಜೆಯಾಗಬಹುದಾದ 'ಕ್ಯೂ-ಸ್ಟಾರ್' ಯೋಜನೆಯಲ್ಲಿ ಚಾಟ್ ಜಿಪಿಟಿ ತಯಾರಕರು ಪ್ರಗತಿ ಸಾಧಿಸಿದ್ದಾರೆ.