ಚೆನ್ನೈ:ಹೆಲಿಕಾಪ್ಟರ್ ಶಾಟ್ ಬ್ಯಾಟಿಂಗ್ಗೆ ಹೆಸರಾಗಿರುವ ಕ್ರಿಕೆಟರ್ ಮಹೇಂದ್ರ ಸಿಂಗ್ ಧೋನಿ ಗ್ರಾಹಕರು ಬಳಸಬಹುದಾದ ಡ್ರೋನ್ ಕ್ಯಾಮೆರಾವೊಂದನ್ನು ಲಾಂಚ್ ಮಾಡಿದ್ದಾರೆ. ವಿಶೇಷವೆಂದರೆ ಇದಕ್ಕೆ ಡ್ರೋನಿ ಎಂದು ಹೆಸರಿಡಲಾಗಿದೆ. ನಗರ ಮೂಲದ ಡ್ರೋನ್ ಸ್ಟಾರ್ಟ್‌ಅಪ್ ಗರುಡಾ ಏರೋಸ್ಪೇಸ್ ಇದನ್ನು ತಯಾರಿಸಿದೆ. ಡ್ರೋನಿ ಡ್ರೋನ್ ಇದು ಕ್ವಾಡ್‌ಕಾಪ್ಟರ್ ಕ್ಯಾಮೆರಾ ಡ್ರೋನ್ ಆಗಿದೆ.
ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಅಗ್ನಿಶ್ವರ್ ಜಯಪ್ರಕಾಶ್ ಪ್ರಕಾರ, ಡ್ರೋನ್ ಅನ್ನು ವಿವಿಧ ಕಣ್ಗಾವಲು ಉದ್ದೇಶಗಳಿಗಾಗಿ ಬಳಸಬಹುದು ಮತ್ತು 2022 ರ ಅಂತ್ಯದ ವೇಳೆಗೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಗರುಡ ಏರೋಸ್ಪೇಸ್ ಭಾನುವಾರ ಕೃಷಿ ಕೀಟನಾಶಕ ಸಿಂಪಡಣೆಗೆ ಬಳಸುವ ಬ್ಯಾಟರಿ ಚಾಲಿತ ಹೊಸ ಕಿಸಾನ್ ಡ್ರೋನ್ ಅನ್ನು ಬಿಡುಗಡೆ ಮಾಡಿದೆ. ದಿನಕ್ಕೆ 30 ಎಕರೆಗಳಷ್ಟು ಭೂಪ್ರದೇಶದಲ್ಲಿ ಇದನ್ನು ಬಳಸಿ ಕೀಟನಾಶಕ ಸಿಂಪಡಿಸಬಹುದು.